ಪಾಂಡವಪುರ,ಮಾ.14- ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಡಿಂಕಾಶೆಟ್ಟಹಳ್ಳಿ ಗ್ರಾಮಕ್ಕೆ ಪ್ರಯಾಣ ಮಾಡುವ ವೇಳೆ ಮಲ್ಲಿಗೆರೆ ಗೇಟ್ ಬಳಿ ಮಾಂಗಲ್ಯ ಸರ ಕಳೆದುಕೊಂಡಿದ್ದ ಮಹಿಳೆಯೊಬ್ಬರಿಗೆ ಬಸ್ ಕಂಡಕ್ಟರ್ ಮಾಂಗಲ್ಯ ಸರ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಶಿವಣ್ಣ ಎಂಬುವವರ ಪತ್ನಿ ವೆಂಕಟಮ್ಮ ಎಂಬುವರೇ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಮಾಂಗಲ್ಯ ಸರ ಕಳೆದುಕೊಂಡಿದ್ದ ಮಹಿಳೆ. ಮೊನ್ನೆ ಸಂಜೆ ವೇಳೆ ಮಂಡ್ಯದಿಂದ ಬಂದಿಳಿದ ವೆಂಕಟಮ್ಮ ಅವರು ಪಾಂಡವಪುರ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಸಂಬಂಧಿಕರ ಮನೆ ಡಿಂಕಾ ಶೆಟ್ಟಹಳ್ಳಿ ಗ್ರಾಮಕ್ಕೆ ತೆರಳಿದ್ದರು.
ಆ ವೇಳೆ ಟಿಕೆಟ್ ತೆಗೆದುಕೊಳ್ಳಲು ಆಧಾರ್ ಕಾರ್ಡ್ ತೆಗೆಯಬೇಕಾದರೆ ಮಾಂಗಲ್ಯ ಸರದ ಕೊಂಡಿ ಕಳಚಿ ಮಾಂಗಲ್ಯ ಸರ ಬಸ್‌ನಲ್ಲಿ ಬಿದ್ದುಹೋಗಿದೆ. ಮಲ್ಲಿಗೆರೆ ಗೇಟ್ ಬಳಿ ಬಸ್ ಇಳಿದು ಕತ್ತಿನಲ್ಲಿ ಮಾಂಗಲ್ಯ ಸರ ಕಾಣದಿದ್ದಕ್ಕೆ ಗಾಬರಿಗೊಂಡು ಊಟ ನಿದ್ದೆ ಬಿಟ್ಟಿದ್ದರು.
ಬಳಿಕ ಅದೇ ಬಸ್‌ನಲ್ಲಿ ಸಂಚರಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಮಾಂಗಲ್ಯ ಸರ ಸಿಕ್ಕಿದೆ. ನಂತರ ಅದನ್ನು ಕಂಡಕ್ಟರ್ ನರಸಿಂಹೇಗೌಡರಿಗೆ ಒಪ್ಪಿಸಲಾಗಿ, ವಿಳಾಸ ಪತ್ತೆ ಹಚ್ಚಿದ ಕಂಡಕ್ಟರ್ ನರಸಿಂಹೇಗೌಡ ಅವರು ಪಾಂಡವಪುರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಾದ ಜಯರಾಂ ಅವರ ಸಮ್ಮುಖದಲ್ಲಿ ವೆಂಕಟಮ್ಮ ಅವರಿಗೆ ಮಾಂಗಲ್ಯ ಸರವನ್ನು ವಾಪಸ್ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಾಂಗಲ್ಯ ಸರ ಸಿಕ್ಕಿದ ಹಿನ್ನೆಲೆಯಲ್ಲಿ ಮಹಿಳೆ ವೆಂಕಟಮ್ಮ ಸಂತಸಗೊಂಡು ಕಂಡಕ್ಟರ್ ಅವರನ್ನು ಮುಕ್ತಕಂಠದಿಂದ ಧನ್ಯವಾದ ತಿಳಿಸಿದರು. ಬಸ್‌ನಲ್ಲಿ ಸಿಕ್ಕಿದ ಮಾಂಗಲ್ಯ ಸರವನ್ನು ಸರ ಕಳೆದುಕೊಂಡಿದ್ದ ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್ ನರಸಿಂಹೇಗೌಡ ಅವರನ್ನು ಸಾರ್ವಜನಿಕರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರ ವರ್ಗದವರು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಬಸ್ ಚಾಲಕ ಪಾಂಡವಪುರ ಭರತ್ ಇತರರಿದ್ದರು.