ಬೆಂಗಳೂರು, ಜ.31- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಖರ್ಗೆ ಅವರೊಂದಿಗೆ ರಾಜಕೀಯ ವಿಚಾರಗಳನ್ನು ಚರ್ಚಿಸಿದ್ದೇನೆ ಎಂದು ಒಮೆ ಹೇಳಿದರೆ, ಕೆಲವೇ ನಿಮಿಷಗಳಲ್ಲಿ ತಾವು ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಗೊಂದಲಕಾರಿ ಹೇಳಿಕೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೌಜನ್ಯಕ್ಕಾಗಿ ಭೇಟಿ ಮಾಡಿದ್ದೇನೆ. ನನ್ನ ಮತ್ತು ಅವರ ಕುಟುಂಬದ ನಡುವೆ ರಾಜಕೀಯ ಮೀರಿದ ಸಂಬಂಧವಿದೆ. ಭೇಟಿಯ ಸಂದರ್ಭದಲ್ಲಿ ರಾಜ್ಯ ರಾಜಕೀಯದ ಕೆಲ ವಿಚಾರಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಕಲ್ಬುರ್ಗಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ.
ಸಮಸ್ಯೆ ಬಗೆಹರಿಸಲು ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಅವರ ಜೊತೆಯೂ ಚರ್ಚೆ ಮಾಡಿದ್ದೇನೆ. ಖರ್ಗೆವರ ಗಮನಕ್ಕೂ ತಂದಿದ್ದೇನೆ. ಅದನ್ನು ಹೊರತುಪಡಿಸಿ ರಾಜ್ಯ ರಾಜಕೀಯದ ವಿಚಾರವಾಗಿ ಯಾವುದೇ ಚರ್ಚೆಗಳನ್ನು ಮಾಡಿಲ್ಲ. ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಲ್ಲಿ ರಾಜ್ಯಕ್ಕೆ ವಿಶೇಷ ಕೊಡುಗೆ ನೀಡಬೇಕೆಂಬುದು ನಮ ಒತ್ತಾಯವಾಗಿದೆ. ಜಿಎಸ್‌ಟಿ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನ್ಯಾಯಯುತವಾದ ಪಾಲು ನೀಡಬೇಕು. ಹಿಂಬಾಕಿಯನ್ನು ಪಾವತಿಸಬೇಕು ಮತ್ತು ಹೊಸದಾಗಿ ಕೊಡುವ ಪಾಲಿನಲ್ಲೂ ಹೆಚ್ಚಿನ ಪ್ರಮಾಣ ಸೇರ್ಪಡೆ ಮಾಡಬೇಕು ಎಂಬುದು ನಮ ನಿರೀಕ್ಷೆ. ಮನೆ ಮನೆಗೆ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ ಯೋಜನೆಯ ವೆಚ್ಚವನ್ನು ಶೇ.50ರಷ್ಟು ಅನುಪಾತದಲ್ಲಿ ಭರಿಸಬೇಕು. ಆ ಯೋಜನೆಗೆ ಈಗ ನಾವೇ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ 13000 ಕೋಟಿಗಳನ್ನು ಬಾಕಿ ಉಳಿಸಿಕೊಂಡಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದರು. ಅದು ಇದುವರೆಗೂ ಬಿಡುಗಡೆಯಾಗಿಲ್ಲ. ಇದರ ಜೊತೆಗೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕರ್ನಾಟಕ ರಾಜ್ಯಕ್ಕೆ ವಿಶೇಷ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು.
