ಹಾಸನ, ನ.8- ಕಾಂಗ್ರೆಸ್ ಪಕ್ಷದ ಆಮಿಷಗಳಿಗೆ ಒಳಗಾಗಿ ಜೆಡಿಎಸ್ ಬಿಟ್ಟು ಹೋಗುವ ಶಾಸಕರು ಯಾರೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಜೆಡಿಎಸ್ ಶಾಸಕರೊಂದಿಗೆ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರ ಬಗ್ಗೆ ಅನುಮಾನ ಪಡುವ ಪರಿಸ್ಥಿತಿಯಿಲ್ಲ. ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೇವೆ. ಪಕ್ಷದಲ್ಲಿ ಅಸಮಾಧಾನಗೊಂಡು ಬಿಟ್ಟು ಹೋಗುವವರು ಯಾರೂ ಇಲ್ಲ. ಆದರೂ ಕಾಂಗ್ರೆಸ್‍ನವರು ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪದೇಪದೇ ಕಾಂಗ್ರೆಸ್‍ನವರು ಇಂತಹ ಗೊಂದಲದ ಸುದ್ದಿಯನ್ನು ಹರಡುತ್ತಿದ್ದಾರೆ ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ . ಎಲ್ಲರೂ ಒಗ್ಗಟ್ಟಾಗಿದ್ದೇವೆ. ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ಸಭೆ ನಡೆಸಿ ಶಾಸಕರ ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದರು.
ರಾಜ್ಯಕ್ಕಾಗಿರುವ ಅನ್ಯಾಯ ಸರಿ ಪಡಿಸಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಹಿತಕ್ಕಾಗಿ ಹೊಂದಾಣಿಕೆ ಹೊರತು ಬೇರೆನೂ ಇಲ್ಲ. ಈ ಹೊಂದಾಣಿಕೆ ಅಧಿಕಾರ, ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಸೀಟು ಗಳಿಸಲಿದೆ ಎಂಬುದು ಮುಖ್ಯವಲ್ಲ. ಜೆಡಿಎಸ್, ಬಿಜೆಪಿ ಸೇರಿ ರಾಜ್ಯದ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದೇ ನಮ್ಮ ಮೊದಲ ಗುರಿಯಾಗಿದೆ.
ಮುಖ್ಯಮಂತ್ರಿ ನಿವಾಸದಲ್ಲಿ ಉಪಹಾರ ಸಭೆ ನಡೆಸಿ ಕೆಲವು ಮಂತ್ರಿಗಳಿಗೆ ಪಕ್ಷಕ್ಕೆ ಬರುವವರನ್ನು ಕರೆ ಕರಲು ಟಾಸ್ಕ್ ಕೊಟ್ಟಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿಗಳು ಪದೇ ಪದೇ 45 ಮಂದಿ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರು ಕಾಂಗ್ರೆಸ್ ಸೇರುತ್ತಾರೆಂದು ಹೇಳುತ್ತಿದ್ದಾರೆ ಇದನ್ನು ತಡೆಯಲು ಯಾರೂ ಕಸರತ್ತು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.
ಅಡ್ವಾಣಿ ಹುಟ್ಟುಹಬ್ಬಕ್ಕೆ ಮೋದಿ, ಶಾ ಸೇರಿ ಗಣ್ಯರಿಂದ ಶುಭಾಶಯ
ಉಪಮುಖ್ಯ ಮಂತ್ರಿಗಳು, ಮುಖ್ಯಮಂತ್ರಿಯಾಗುವುದಾದರೆ ನಮ್ಮ ಪಕ್ಷದ ಶಾಸಕರನ್ನು ಕಳುಹಿಸುವುದಾಗಿ ನಾನೇ ಹೇಳಿದ್ದೇನೆ. ರಾಜ್ಯದ ಜನ ಬಹುಮತ ಕೊಟ್ಟಿದ್ದರು. ಏಕೆ ಇಂತಹ ಕೆಲಸ ಮಾಡಲಾಗುತ್ತಿದೆ. ಪ್ರಾಮಾಣಿಕವಾಗಿ ನಾಡಿನ ಅಭಿವೃದ್ಧಿ ಕೆಲಸ ಮಾಡಲು ಕಾಂಗ್ರೆಸ್ ನಾಯಕರಿಗೆ ಸಲಹೆ ಮಾಡುವುದಾಗಿ ಹೇಳಿದರು. ಬರ ಪರಿಹಾರ ಕೇಳಲು ನಾವ್ಯಾಕೆ ಹೋಗಬೇಕು. 136 ಶಾಸಕರಿರುವ ನೀವು ಪ್ರಧಾನಿಯವರ ಬಳಿಗೆ ಹೋಗಿ ಪರಿಹಾರ ಕೇಳಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.
ನಾನು ಬರಿ ಸತ್ಯ ಹೇಳುತ್ತೇನೆಂದು ಎದೆ ಮೇಲೆ ಹಾಕಿಕೊಂಡಿಲ್ಲ. ಸತ್ಯಹರಿಶ್ಚಂದ್ರ ಕಾಡಿಗೆ ಹೋಗುವಾಗ ನಿಮ್ಮ ಮನೆ ಹಿತ್ತಲಿನಿಂದಲೇ ಹೋಗಿದ್ದು ಅಲ್ಲವೇ ಎಂದು ವ್ಯಂಗ್ಯವಾಡಿದರು. ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಹಾಡಿದೆ. ನಾಡಿನ ಜನ 136 ಶಾಸಕರನ್ನು ಆಯ್ಕೆ ಮಾಡಿ ನಿಮಗೆ ಕೊಟ್ಟಿದ್ದರೂ ಏಕೆ ಆಪರೇಷನ್ ಹಸ್ತ ಮಾಡುತ್ತೀರೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು. ಈ ಸರ್ಕಾರ 5 ವರ್ಷ ಇದ್ದರೆ 10 ಲಕ್ಷ ಕೋಟಿ ಸಾಲ ಮಾಡುತ್ತೀರಿ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ ಗ್ಯಾರಂಟಿ ಯೋಜನೆಗಳು.
ಬರವೀಕ್ಷಣೆ ನೆಪದಲ್ಲಿ ಎಲ್ಲೆಲ್ಲಿ ಸಮರ್ಥ ನಾಯಕರು ಇರುತ್ತಾರೋ, ಅವರನ್ನು ಹುಡುಕಿಕೊಂಡು ಕರೆದುಕೊಂಡು ಬನ್ನಿ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಟಿ. ದೇವೇಗೌಡರು ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಪಕ್ಷದ ಶಾಸಕರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.