Thursday, December 7, 2023
Homeರಾಜ್ಯಸದ್ದು ಗದ್ದಲವಿಲ್ಲದೆ ನಡೆಯುತ್ತಿದೆಯಾ ಆಪರೇಷನ್ ಕಮಲ..?

ಸದ್ದು ಗದ್ದಲವಿಲ್ಲದೆ ನಡೆಯುತ್ತಿದೆಯಾ ಆಪರೇಷನ್ ಕಮಲ..?

ಬೆಂಗಳೂರು, ನ.8- ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಭಾಗವಾಗಿ ಸದ್ದು ಮಾಡುತ್ತಿರುವ ಆಪರೇಷನ್ ಕಮಲ ತೆರೆಮರೆಯಲ್ಲಿ ಚಾಲ್ತಿಯಲ್ಲಿದ್ದು, ಕಾಂಗ್ರೆಸ್‍ನ 50ಕ್ಕೂ ಹೆಚ್ಚು ಮಂದಿ ಅಸಮಧಾನಿತ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡುತ್ತಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನವೇ ಸರ್ಕಾರವನ್ನು ಪತನಗೊಳಿಸಲು ಸಂಚು ನಡೆದಿದ್ದು, ಅದಕ್ಕಾಗಿ ಬೇರೆ ಬೇರೆ ರಾಜ್ಯಗಳ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಕಾಂಗ್ರೆಸ್‍ನ ಅಸಮಧಾನಿತ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿಯ ಎಲ್ಲಾ ನಾಯಕರು 17 ತಂಡಗಳನ್ನು ಮಾಡಿಕೊಂಡು ಬರ ಅಧ್ಯಯನ ಮಾಡುತ್ತಿರುವುದರಿಂದ ಕಾಂಗ್ರೆಸ್ ನಿರಾಳವಾಗಿದೆ. ಆದರೆ ಬೆಜೆಪಿ ನಾಯಕರು ಬರ ಅಧ್ಯಯನ ನಡೆಸುತ್ತಿದ್ದರೆ, ಒಳಗೊಳಗೆ ಅನಾಮಧೇಯರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ.

ಕಾಂಗ್ರೆಸ್ ಶಾಸಕರ ಬಳಿ ಚರ್ಚೆ ನಡೆಸುವಾಗ ಈಗಾಗಲೇ ತಮ್ಮೊಂದಿಗೆ 50ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ. ನೀವು ಒಪ್ಪಿಕೊಂಡರೆ 51ನೇಯವರಾಗುತ್ತಿರಾ ? ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯವನ್ನು ರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಬಿಜೆಪಿ ನಿರ್ವಹಣೆ ಮಾಡಲಿದೆ, ಯಾವುದೇ ಅನುಮಾನ ಇಲ್ಲದೆ ನಮ್ಮ ಜೊತೆ ಕೈ ಜೋಡಿಸಿ ಎಂದು ಕಾಂಗ್ರೆಸ್‍ನ ಅತೃಪ್ತ ಹಾಗೂ ಹೊಸ ಶಾಸಕರಿಗೆ ಹೇಳಲಾಗುತ್ತಿದೆ ಎಂಬ ಮಾಹಿತಿ ಇದೆ.

ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ನಾಯಕರು ರಂಗ ಪ್ರವೇಶ ಮಾಡಿದ್ದಾರೆ. ನೇರವಾಗಿ ದೆಹಲಿಯ ಬಿಜೆಪಿ ನಾಯಕರನ್ನು ಭೇಟಿ ಮಾಡಿಸುವುದಾಗಿ ಹಾಗೂ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ಹಿಂದೆ ಮಹಾರಾಷ್ಟ್ರ ಸರ್ಕಾರ ಪತನಗೊಳಿಸುವಾಗಿ ಶಿವಸೇನೆಯ 47ಕ್ಕೂ ಹೆಚ್ಚು ಶಾಸಕರನ್ನು ಕೇಂದ್ರ ಮೀಸಲು ಪಡೆಯ ರಕ್ಷಣೆಯೊಂದಿಗೆ ಅಸ್ಸಾಂನಲ್ಲಿರಿಸಲಾಗಿತ್ತು. ಉಗ್ರ ಹೋರಾಟಕ್ಕೆ ಹೆಸರಾಗಿದ್ದ ಶಿವಸೇನೆಯೇ ಅಸಹಾಯಕತೆ ಸಿಲುಕಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಲ್ಲಿಯೂ ಅದೇ ಮಾದರಿಯಲ್ಲಿ ಕಾರ್ಯಚರಣೆಯಾಗುತ್ತದೆ, ನಿಮಗೆ ಸಂಪೂರ್ಣ ರಕ್ಷಣೆ ಕೊಡಿಸುತ್ತೇವೆ, ಮಹಾರಾಷ್ಟ್ರ ಅಸ್ಸಾಂ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ನಿಮಗೆ ಬೇಕಾದ ಕಡೆ ಇರಿಸುತ್ತೇವೆ. ಧೈರ್ಯವಾಗಿ ನಮ್ಮ ಜೊತೆ ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‍ನಲ್ಲಿ ಕೆಲವೇ ಕೆಲವು ಕುಟುಂಬಗಳ ಪ್ರಾಬಲ್ಯದಿಂದ ಬೇಸರಗೊಂಡಿರುವವರು, ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವವರು, ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಾತು ಕೇಳುತ್ತಿಲ್ಲ, ಅಧಿಕಾರಿಗಳ ವರ್ಗಾವಣೆಯಲ್ಲಿ ತಮ್ಮ ಮಾತು ನಡೆಯುತ್ತಿಲ್ಲ ಎಂಬೆಲ್ಲಾ ಆಕ್ಷೇಪಗಳು ಹೊಂದಿರುವವರನ್ನು ಸಂಪರ್ಕಿಸಲಾಗುತ್ತಿದೆ.

ದುಗುಡ ಹುಟ್ಟಿಸಿರುವ ಬೆಳವಣಿಗೆ:
ಕಾಂಗ್ರೆಸ್ ನಾಯಕರಿಗೆ ದುಗುಡ ಹುಟ್ಟಿಸಿರುವ ಮತ್ತೊಂದು ಬೆಳವಣಿಗೆ ಎಂದರೆ, ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿರುವ ಬಗ್ಗೆ ಕೆಲವು ಶಾಸಕರು ಹೇಳಿಕೊಳ್ಳದೆ, ತಮಗೆ ಏನು ಗೋತ್ತಿಲ್ಲ ಎಂಬಂತೆ ತಟಸ್ಥವಾಗಿರುವುದು.

ಬಿಜೆಪಿಯವರು ಚರ್ಚೆ ಮಾಡುವ ವೇಳೆ ಕಾಂಗ್ರೆಸ್ ಶಾಸಕರ ಬಳಿ, ತಾವು ಯಾರನ್ನೆಲ್ಲಾ ಸಂಪರ್ಕ ಮಾಡಿದ್ದೇವೆ ಎಂದು, ಬಿಜೆಪಿ ಜೊತೆ ಕೈಜೋಡಿಸಲು ಯಾರೆಲ್ಲಾ ಸಿದ್ಧರಿದ್ದಾರೆ ಎಂಬ ವಿಚಾರಗಳನ್ನು ಅನೌಪಚಾರಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಪಕ್ಷ ನಿಷ್ಠ ಹಾಗೂ ಪ್ರಾಮಾಣಿಕ ಶಾಸಕರು ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡುವಾಗ ಬಿಜೆಪಿಯ ಮುಖಂಡರು ತಮ್ಮನ್ನು ಸಂಪರ್ಕ ಮಾಡಿರುವುದು, ಏನೆಲ್ಲಾ ಆಮಿಶವೊಡ್ಡಿದ್ಧಾರೆ ಎಂಬುದನ್ನು ಹೇಳಿಕೊಳ್ಳುತ್ತಿದ್ದಾರೆ.

ಜೊತೆಗೆ ಬಿಜೆಪಿಯವರು ಯಾರನ್ನೆಲ್ಲಾ ಸಂಪರ್ಕ ಮಾಡಿರುವುದಾಗಿ ಹೇಳಿದ್ದಾರೆ ಎಂದನ್ನು ಬಾಯಿ ಬಿಡುತ್ತಿದ್ದಾರೆ. ಪಕ್ಷ ನಿಷ್ಠರು ಹೇಳಿದಂತೆ ಬಿಜೆಪಿಯವರು ಸಂಪರ್ಕ ಮಾಡಿರುವ ಬಗ್ಗೆ ಬಹಳಷ್ಟು ಶಾಸಕರು ಮಾಹಿತಿ ನೀಡದೆ ಇರುವುದು ಕಾಂಗ್ರೆಸ್ ನಾಯಕರ ನಿದ್ದೆ ಗೆಡಿಸಿದೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಲು ಹೆಸರುಗಳನ್ನು ತೇಲಿ ಬಿಡುತ್ತಿದ್ದಾರೆಯೇ ? ಅಥವಾ ಅದರಲ್ಲೇನ್ನಾದರೂ ಸತ್ಯಾಂಶ ಇದೆಯೇ ಎಂಬ ಗೊಂದಲ ಕಾಂಗ್ರೆಸಿಗರನ್ನು ಕಾಡುತ್ತಿದೆ.

ಅಡ್ವಾಣಿ ಹುಟ್ಟುಹಬ್ಬಕ್ಕೆ ಮೋದಿ, ಶಾ ಸೇರಿ ಗಣ್ಯರಿಂದ ಶುಭಾಶಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಪರೇಷನ್ ಕಮಲದ ಮೇಲೆ ನಿಗಾವಹಿಸುವಂತೆ ಸಿಐಡಿಗೆ ಆದೇಶಿಸಿದ್ದು, ಬಿಜೆಪಿ ನಾಯಕರ ಚಲನವಲನಗಳ ಮೇಲೆ ನಿಗಾ ವಹಿಸುವ ಜೊತೆಗೆ ಕಾಂಗ್ರೆಸ್ ನಾಯಕರನ್ನು ಯಾರೆಲ್ಲಾ ಸಂಪರ್ಕ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚಿಸಲಾಗಿದೆ. ಆಪರೇಷನ್ ಕಮಲದ ಪ್ರತಿ ಮಾಹಿತಿ ಮೇಲೂ ಕಣ್ಣಿಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಗುಪ್ತಚರ ಇಲಾಖೆಗೆ ತಾಕೀತು ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ವಾಟ್ಸ್‍ಅಪ್ ಕಾಲ್‍ಗಳಲ್ಲಿ ಸಮಾಲೋಚನೆಗಳಾಗುತ್ತಿರುವುದರಿಂದ ಮಾಹಿತಿ ಮೇಲೆ ನಿಗಾವಹಿಸುವುದು ದೊಡ್ಡ ಸಲಾವಾಗಿದೆ. ಆದರೂ ತಮ್ಮದೇ ಆದ ಮೂಲದಿಂದ ಚಲನವಲನಗಳ ಮೇಲೆ ಗುಪ್ತದಳ ನಿಗಾ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ 50 ಮಂದಿ ಶಾಸಕರನ್ನು ಬಿಜೆಪಿ ಪರವಾಗಿ ಅನಾಮದೇಯರು ಸಂಪರ್ಕ ಮಾಡಿದ್ದಾರೆ. ಗುತ್ತಿಗೆ ಟೆಂಡರ್, ವರ್ಗಾವಣೆ ಸೇರಿದಂತೆ ಇತರ ವಿಚಾರಗಳ ನೆಪದಲ್ಲಿ ಶಾಸಕ ಬಳಿ ಬರುವ ಅನಾಮದೇಯರು, ಅಲ್ಲಿಂದ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಭಾವಿಗಳಿಗೆ ಕರೆ ಮಾಡಿ, ಕಾಂಗ್ರೆಸ್ ಶಾಸಕರೊಂದಿಗೆ ಮಾತನಾಡಿಸುತ್ತಿದ್ದಾರೆ. ಅನಂತರ ಚರ್ಚೆಗಳು ಮುಂದುವರೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಕೆಲವು ಶಾಸಕರು ಮಾಹಿತಿ ಹಂಚಿಕೊಳ್ಳುತ್ತಿರುವುದು, ಇನ್ನೂ ಕೆಲವರು ಏನು ಗೋತ್ತಿಲ್ಲದಂತೆ ಮೌನವಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. ತಮ್ಮನ್ನು ಭೇಟಿ ಮಾಡಿದವರು ಯಾರು ಎಂಬ ತಲೆಬುಡವೂ ಅರ್ಥವಾಗದೆ ಕೆಲವು ಶಾಸಕರು ಗೊಂದಲದಲ್ಲಿರುವುದಾಗಿಯೂ ಹೇಳಲಾಗುತ್ತಿದೆ.

ಬೆಳಗಾವಿ ಅವೇಶನದಲ್ಲಿ ಆಪರೇಶನ್ ಕಮಲ ಚರ್ಚೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಏನಾಗಲಿದೆಯೋ ಗೋತ್ತಿಲ್ಲ, ಅದಕ್ಕೂ ಮುನ್ನಾ ಆಪರೇಷನ್ ಕಮಲ ನಡೆಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಬೇಕು ಎಂಬ ಉಮೇದಿನಲ್ಲಿ ಕಾರ್ಯಚರಣೆ ನಡೆಯುತ್ತಿದೆ. ಕೆಲವು ಶಾಸಕರು ಲೋಕಸಭೆ ಚುನಾವಣೆವರೆಗೂ ತಾವು ಏನನ್ನೂ ಹೇಳುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News