ಚಿಕ್ಕಬಳ್ಳಾಪುರ,ಏ.3– ಇಲ್ಲಿನ ಶ್ರೀನಿವಾಸ ಸಾಗರ ಜಲಾಶಯದ ನೀರಿನಲ್ಲಿ ಮೂವರು ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಜಲಾಶಯ ನೋಡಲೆಂದು ಆಗಮಿಸಿದ್ದ ಬೆಂಗಳೂರು ಮೂಲದ ಬಶೀರ್ (43), ಪರ್ಹಿನ್ (45) ಹಾಗೂ ಇಮ್ರಾನ್ (45) ಸಾವನ್ನಪ್ಪಿದ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಘಟನೆಯ ವಿವರ :
ರಂಜಾನ್ ಹಬ್ಬದ ನಂತರ ಕುಟುಂಬ ಸಮೇತರಾಗಿ ತಾಲೂಕಿನ ವಿವಿಧ ಕಡೆ ಪ್ರವಾಸಕ್ಕೆಂದು ಆಗಮಿಸಿದ್ದ ಇವರು ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ನೋಡಲೆಂದು ಆಗಮಿಸಿದ್ದ ವೇಳೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೂವರ ಮೃತ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.