ಬೆಂಗಳೂರು,ಫೆ.2-ಪರಿಚಿತರಂತೆ ಮನೆಯ ಬಾಗಿಲು ತೆಗೆಸಿ ಒಳ ನುಗ್ಗಿದ ಡಕಾಯಿತರು ಮಾರಾಕಾಸ್ತ್ರಗಳಿಂದ ಬೆದರಿಸಿ ಹಣ, ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಒಂಬತ್ತು ಮಂದಿ ಟ್ಯಾಕ್ಸಿ ಚಾಲಕರು ಸೇರಿಕೊಂಡು ಮಾರ್ಕೊಂಡನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದಾರೆ.ನಿನ್ನೆ ರಾತ್ರಿಎಂದಿನಂತೆ ತಮ ಕರ್ತವ್ಯ ಮುಗಿಸಿಕೊಂಡು ಬಂದು ಊಟ ಮಾಡಿ ಎಲ್ಲರೂ ಮಲಗಿದ್ದಾರೆ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಇವರ ಮನೆಯ ಬಾಗಿಲನ್ನು ಯಾರೋ ಬಡಿದಿದ್ದಾರೆ.
ಶಬ್ದದಿಂದ ಎಚ್ಚರಗೊಂಡು ಪರಿಚಿತರೇ ಬಂದಿರಬಹುದೆಂದು ತಿಳಿದು ಬಾಗಿಲು ತೆಗೆಯುತ್ತಿದ್ದಂತೆ ಏಳು ಮಂದಿ ಡಕಾಯಿತರು ಏಕಾಏಕಿ ಒಳಗೆ ನುಗ್ಗಿ ಮನೆಯಲ್ಲಿದ್ದವರಿಗೆ ಮಾರಾಕಾಸ್ತ್ರ ತೋರಿಸಿ ಕಿರುಚಾಡದಂತೆ ಬೆದರಿಸಿ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬಳಿಕ ಟ್ಯಾಕ್ಸಿ ಚಾಲಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಡಕಾಯಿತರ ಪತ್ತೆಗೆ ಬಲೆ ಬೀಸಿದ್ದಾರೆ.
