ಮುಜಫರಾಬಾದ್,ಜು.29- ಪಾಕಿಸ್ತಾನ ಆಕ್ರಮಿತ ಕಾಶೀರದಲ್ಲಿ (ಪಿಒಕೆ) ಮೂಲಭೂತ ಹಕ್ಕುಗಳು ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಅಮಾನುಷ ಗುಂಡಿನ ದಾಳಿಯಲ್ಲಿ ಕನಿಷ್ಠ 14 ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.
ಈ ಅತ್ಯಂತ ಕ್ರೂರ ದಮನ ಕಾರ್ಯಾಚರಣೆಯನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದು, ಇಸ್ಲಾಮಾಬಾದ್ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಭಾರತದಂಥ ಶತ್ರುಗಳು ಎಂದು ಜರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಖವಾಜಾ ಆಸಿಫ್, ನಾನು ಪ್ರತಿಭಟನಾಕಾರರನ್ನು ಭಾರತದಂತೆಯೇ ವರ್ಗಕ್ಕೆ ಸೇರಿಸುತ್ತೇನೆ ಮತ್ತು ಅವರನ್ನು ಶತ್ರುಗಳೆಂದು ಪರಿಗಣಿಸುತ್ತೇನೆ ಎಂದು ಹೇಳುವ ಮೂಲಕ ಸರ್ಕಾರದ ಕ್ರೌರ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಹಾಗೂ ಮಾತುಕತೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಪ್ರತಿಭಟನಾಕಾರರು ಆಧುನಿಕ ಶಸಾ್ತ್ರಸ್ತ್ರಗಳನ್ನು ಹೊಂದಿದ್ದರು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪಾಕಿಸ್ತಾನಿ ಅಧಿಕಾರಿಗಳು ಸುಳ್ಳು ಆರೋಪ ಹೊರಿಸಿದ್ದಾರೆ. ಆದರೆ ಸ್ಥಳೀಯರ ಪ್ರಕಾರ, ಜೂನ್ ತಿಂಗಳಿಂದ ಆರಂಭವಾಗಿರುವ ಈ ಪ್ರತಿಭಟನೆಗಳು ಮತ್ತು ಸರಣಿ ಮಿಲಿಟರಿ ದಮನ ಕಾರ್ಯಾಚರಣೆಗಳಲ್ಲಿ ಈಗಾಗಲೇ 80ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಏರುತ್ತಿರುವ ಹಣದುಬ್ಬರ, ಸಬ್ಸಿಡಿ ಗೋಧಿ ಹಿಟ್ಟಿನ ಕೊರತೆ, ವಿದ್ಯುತ್ ವ್ಯತ್ಯಯ ಹಾಗೂ ಆಡಳಿತಾತಕ ದಬ್ಬಾಳಿಕೆಯು ಈ ಪ್ರದೇಶದಲ್ಲಿ ಜನಸಾಮಾನ್ಯರನ್ನು ಬೀದಿಗಿಳಿಯುವಂತೆ ಮಾಡಿದೆ.
ರಾವಲ್ಕೋಟ್‌ನಿಂದ ಮುಜಫರಾಬಾದ್ ಕಡೆಗೆ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೇತೃತ್ವದಲ್ಲಿ ಸುಮಾರು 5,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದರು.
ಕಾಶೀರಿ ನಿರಾಶ್ರಿತರಿಗೆ ಮೀಸಲಾದ 12 ಶಾಸಕಾಂಗ ಸ್ಥಾನಗಳನ್ನು ರದ್ದುಪಡಿಸಬೇಕು ಹಾಗೂ ಪಾಕ್ ಆಕ್ರಮಿತ ಕಾಶೀರ(ಪಿಒಕೆ) ನಿವಾಸಿಗಳು ಮಾತ್ರ ತಮ ಶಾಸಕಾಂಗವನ್ನು ಆಯ್ಕೆ ಮಾಡುವ ಹಕ್ಕು ಹೊಂದಿರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಇಸ್ಲಾಮಾಬಾದ್ ಮೂಲದ ರಾಜಕೀಯ ಪಕ್ಷಗಳು ಪಿಒಕೆ ಆಡಳಿತದ ಮೇಲಿನ ತನ್ನ ಹಸ್ತಕ್ಷೇಪವನ್ನು ಮುಂದುವರಿಸಲು ಈ ವ್ಯವಸ್ಥೆ ಅವಕಾಶ ಮಾಡಿಕೊಡುತ್ತಿದೆ ಎಂದು ಜೆಎಎಸಿ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ಅಪ್ರಚೋದಿತವಾಗಿ ಗುಂಡು ಹಾರಿಸಿದ್ದು, ಜೆಎಎಸಿ ಸ್ಥಾಪಕ ಸದಸ್ಯ ಉಮರ್ ನಜೀರ್ ಅವರ ಕಿರಿಯ ಸಹೋದರ ಉಸಾನ್ ನಜೀರ್ ಸೇರಿದಂತೆ 14 ಕಾರ್ಯಕರ್ತರು ಬಲಿಯಾಗಿದ್ದಾರೆ. ಅಲ್ಲದೆ, ಎರಡು ಡಜನ್‌ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಭಾರತದ ತೀವ್ರ ಖಂಡನೆ:
ಪಿಒಕೆಯಲ್ಲಿ ಪಾಕಿಸ್ತಾನ ನಡೆಸುತ್ತಿರುವ ದಬ್ಬಾಳಿಕೆ ಹಾಗೂ ಬಲವಂತದ ಚುನಾವಣೆಗಳ ಕುರಿತು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಪ್ರತಿಕ್ರಿಯಿಸಿದೆ. ದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಪಾಕಿಸ್ತಾನವು ತನ್ನ ಅಕ್ರಮ ಆಕ್ರಮಣವನ್ನು ಮತ್ತು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯನ್ನು ಮರೆಮಾಚಲು ಇಂತಹ ಅಲಂಕಾರಿಕ ಚುನಾವಣಾ ಪ್ರಕ್ರಿಯೆಗಳನ್ನು ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನದ ಅಕ್ರಮ ಮತ್ತು ಬಲವಂತದ ಆಕ್ರಮಣದಲ್ಲಿರುವ ಪ್ರದೇಶಗಳು ಸೇರಿದಂತೆ ಜಮು ಮತ್ತು ಕಾಶೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ ಎಂದು ಭಾರತ ತನ್ನ ದೀರ್ಘಕಾಲದ ಸ್ಪಷ್ಟ ನಿಲುವನ್ನು ಪುನರುಚ್ಚರಿಸಿದೆ. ಅಲ್ಲದೆ ಪಿಒಕೆಯಲ್ಲಿ ನಡೆಯುತ್ತಿರುವ ಸಾಮೂಹಿಕ ಆಕ್ರೋಶವು ಪಾಕಿಸ್ತಾನದ ಆರ್ಥಿಕ ಶೋಷಣೆ ಮತ್ತು ಆಡಳಿತಾತಕ ವೈಫಲ್ಯದ ನೇರ ಪರಿಣಾಮವಾಗಿದೆ ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.
