ನವದೆಹಲಿ,ಜು.29- ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ಹಾಗೂ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ಹಂಚಿಕೊಳ್ಳಲಾಗಿರುವ ಅವಹೇಳನಕಾರಿ, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕುವಂತೆ ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮ ಜಾಲತಾಣವಾದ ಎಕ್ಸ್ಗೆ ಅಧಿಕೃತ ಪತ್ರ ಬರೆದಿದ್ದಾರೆ.
ವಿವಾದಾತಕ ಪೋಸ್ಟ್‌ಗಳು ಹಾಗೂ ವೀಡಿಯೊಗಳನ್ನು ಯಾವುದೇ ವಿಳಂಬವಿಲ್ಲದೆ ತೆಗೆದುಹಾಕುವಂತೆ ಸೂಚಿಸಿರುವ ಪೊಲೀಸರು, ಆ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ ಖಾತೆದಾರರ ಸಂಪೂರ್ಣ ನೋಂದಣಿ ವಿವರಗಳನ್ನು (ಹೆಸರು, ವಿಳಾಸ, ಇಮೇಲ್ ಐಡಿ, ಸಂಪರ್ಕ ಸಂಖ್ಯೆ, ಲಾಗಿನ್/ಲಾಗ್‌ಔಟ್ ಸಮಯದ ವಿವರಗಳು) ಒದಗಿಸುವಂತೆ ಕೋರಿದ್ದಾರೆ.
ತನಿಖೆಯ ಹಿತದೃಷ್ಟಿಯಿಂದ ಮತ್ತು ಮುಂದಿನ ಕಾನೂನು ಕ್ರಮಗಳಿಗಾಗಿ ಆಪಾದಿತ ಪೋಸ್ಟ್‌ಗಳಿಗೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ಡೇಟಾವನ್ನು ಭದ್ರಪಡಿಸುವಂತೆ ಎಕ್‌್ಸ ವೇದಿಕೆಗೆ ಸೂಚಿಸಲಾಗಿದೆ.
ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 63(4)ರಡಿ ಎಲೆಕ್ಟ್ರಾನಿಕ್ ದಾಖಲೆಗಳಿಗೆ ಸಂಬಂಧಿಸಿದಂತೆ ಪ್ರಮಾಣಪತ್ರವನ್ನು ಒದಗಿಸುವಂತೆಯೂ ನೋಟಿಸ್‌ನಲ್ಲಿ ಕೋರಲಾಗಿದೆ.
ಜುಲೈ 20ರಂದು ನಡೆದ ಪ್ರತಿಭಟನೆ ಹಾಗೂ ತದನಂತರದ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತ್ತೀಚಿನ ರಾಷ್ಟ್ರೀಯ ನಾಯಕರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ಹಾಗೂ ನಿಂದನಾತಕ ವಿಷಯಗಳನ್ನು ದೆಹಲಿ ಪೊಲೀಸರ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡವು ತೀವ್ರವಾಗಿ ಪರಿಶೀಲಿಸುತ್ತಿದೆ.
ಹಿನ್ನೆಲೆ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಿರಳೆ ಜನತಾ ಪಕ್ಷ (ಅಎ) ಮತ್ತು ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ಚಲೋ ಸಂಸದ್ ಮೆರವಣಿಗೆ ಹಮಿಕೊಳ್ಳಲಾಗಿತ್ತು.
ಈ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ತೀವ್ರ ಘರ್ಷಣೆ ನಡೆದು, ಪೊಲೀಸ್ ವಾಹನಗಳಿಗೆ ಹಾನಿ ಹಾಗೂ ಹಿಂಸಾಚಾರ ವರದಿಯಾಗಿತ್ತು. ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಹಾಗೂ ಪೆಲೆಟ್ ಗನ್‌ಗಳನ್ನು ಬಳಸಿದ್ದರು. ಈ ಗಲಭೆಯಲ್ಲಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ 65ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದರು.
ಮಹಿಳಾ ಪ್ರತಿಭಟನಾಕಾರರೊಬ್ಬರಿಗೆ ಹೆಚ್ಚುವರಿ ಡಿಸಿಪಿ ಕಪಾಳಮೋಕ್ಷ ಮಾಡಿದ ವೀಡಿಯೊ ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ದೆಹಲಿ ಹೈಕೋರ್ಟ್ ಕೂಡ ವಿಚಾರಣೆ ನಡೆಸಿತ್ತು.
ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ಶಿಕ್ಷಣ ಸಚಿವರ ರಾಜೀನಾಮೆ ಸೇರಿದಂತೆ ಪ್ರಮುಖ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ, ಸಿಜೆಪಿ ತನ್ನ 36 ದಿನಗಳ ಸುದೀರ್ಘ ಧರಣಿ ಸತ್ಯಾಗ್ರಹವನ್ನು ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಡಿಜಿಟಲ್ ವಿಷಯಗಳ ವಿರುದ್ಧ ದೆಹಲಿ ಪೊಲೀಸರು ಸೈಬರ್ ವಿಭಾಗದ ಮೂಲಕ ಕಠಿಣ ನಿಲುವು ಮುಂದುವರೆಸಿದ್ದಾರೆ.
