ಚಿಕ್ಕಮಗಳೂರು,ಫೆ.3- ದಕ್ಷಿಣ ಕನ್ನಡ-ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ಅಪಾರ ಸಸ್ಯ ಸಂಪತ್ತು ನಾಶವಾಗಿದೆ.
ಮೂಡಿಗೆರೆ ಅರಣ್ಯ ವಲಯದೊಳಗೆ ಕಾಣಿಸಿಕೊಂಡಿರುವ ಬೆಂಕಿಯಿಂದ ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸಂಪೂರ್ಣವಾಗಿ ಧಗಧಗಿಸಿ ಉರಿದಿದೆ. ಎರಡು ಗಂಟೆಗೂ ಹೆಚ್ಚು ಕಾಲ ಬೆಂಕಿಯ ಜ್ವಾಲೆ ಧಗಧಗಿಸುತ್ತಿತ್ತು.
ಚಾರ್ಮಾಡಿ ಘಾಟ್ ರಸ್ತೆಯ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಸಂಚರಿಸುವ ವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಮುಂಜಾಗ್ರತ ಕ್ರಮವಾಗಿ ಬೆಂಕಿ ರೇಖೆ ಮಾಡದೆ ನಿರ್ಲಕ್ಷ ವಹಿಸಿದ್ದರಿಂದ ಈ ಅನಾಹುತಕ್ಕೆ ಕಾರಣವಾಗಿದೆ.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.
