ಚಿಕ್ಕಮಗಳೂರು, ಏ.22- ಮುಳ್ಳಯ್ಯನಗಿರಿ ಪ್ರದೇಶದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ, ಇಂದಿನಿಂದ ಜೂನ್ 20ರವರೆಗೆ ಅಂದರೆ 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಈ ಪ್ರದೇಶದಲ್ಲಿ ಉಪಯೋಗಿಸಿ ಎಸೆಯುವಂತಹ ಕುಡಿಯುವ ನೀರಿನ ಪ್ಲಾಸ್ಟಿಕ್ (0.00 ರಿಂದ 4.99 ಲೀಟರ್‌ವರೆಗಿನ ಪ್ಲಾಸ್ಟಿಕ್ ಬಾಟಲಿಗಳು) ಬಾಟಲಿಗಳು, ಚಿಪ್ಸ್ ಪ್ಲಾಸ್ಟಿಕ್ ಪ್ಯಾಕೇಟ್ಳು, ಗುಟ್ಕಾ ಪ್ಯಾಕೇಟ್‌ಳು ಹಾಗೂ ಇದೇ ರೀತಿ ತಿನ್ನಲು ಕೊಂಡೊಯ್ಯುವಿಕೆಯ ವಸ್ತುಗಳ ಬಳಕೆ ಮತ್ತು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಪ್ಲಾಸ್ಟಿಕ್ ಉತ್ಪನ್ನಗಳು, ಮಾರಾಟ ಮತ್ತು ಬಳಕೆ ನಿಯಮ, 1999ರ ನಿಯಮ 3(ಬಿ) ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶದ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಬಿಎನ್ಎಸ್ 221 ಮತ್ತು ಅನ್ವಯಿಸಬಹುದಾದ ಇತರ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.