ನೆಲಮಂಗಲ ಮೇ 13- ಆಯಿಲ್ ಗೋದಾಮುವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಸುಮಾರು 30 ಕೋಟಿಗೂ ಹೆಚ್ಚು ಮೌಲ್ಯದ ಆಯಿಲ್ ಬೆಂಕಿಗೆ ಹೊತ್ತಿ ಉರಿದಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಡಕಮಾರನಹಳ್ಳಿ ಬಳಿ ಇರುವ ಶೆಲ್ ಕಂಪನಿಗೆ ಸೇರಿದ ಆಯಿಲ್ ಗೋದಾಮಿನಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಗೋದಾಮು ಪೂರ್ತಿ ಬೆಂಕಿ ಆವರಿಸಿಕೊಂಡು ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ, ಪೀಣ್ಯ ಮತ್ತು ಯಶವಂತಪುರ ಭಾಗದ 12ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳೊಂದಿಗೆ ಅಧಿಕಾರಿಗಳೂ ಸೇರಿದಂತೆ 80 ಮಂದಿ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಸತತವಾಗಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾಗ ಕ್ಷಣಕ್ಷಣಕ್ಕೂ ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದದ್ದು ಕಂಡು ಬಂದಿತು.
ಈ ನಡುವೆ ಅಕ್ಕಪಕ್ಕದ ಗೋದಾಮು ಮನೆಗಳಿಗೆ ಬೆಂಕಿ ತಗಲುವ ಆತಂಕ ಸಹ ನಿರ್ಮಾಣವಾಗಿತ್ತು.40 ಸಾವಿರ ಅಡಿಯಲ್ಲಿರುವ ಈ ಗೋದಾಮಿನಲ್ಲಿ ರಾಜ್ಯದಲ್ಲಿ ಯಾವುದೇ ಆಯಿಲ್ ಸಮಸ್ಯೆ ಬಾರದಂತೆ ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಸಂಗ್ರಹಿಸಲಾಗಿತ್ತು.
ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಆಯಿಲ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಲಾಗಿತ್ತು. ಆದರೆ ಇಂದು ಮುಂಜಾನೆ ಬೆಂಕಿ ಅವಘಡದಿಂದಾಗಿ ಸಂಗ್ರಹಿಸಲಾಗಿದ್ದ ಆಯಿಲ್ ಸಂಪೂರ್ಣ ಹೊತ್ತಿ ಉರಿದು ಭಾರಿ ನಷ್ಟ ಉಂಟಾಗಿದೆ.
ಅಗ್ನಿ ಶಾಮಕ ಸಿಬ್ಬಂದಿ ಸತತವಾಗಿ ಹತ್ತು ಗಂಟೆಗಳಿಗೂ ಹೆಚ್ಚುಕಾಲ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾಗ ಆಯಿಲ್ ಆಗಿದ್ದರಿಂದಾಗಿ ಕಂಟ್ರೋಲ್‌ಗೆ ಬಾರದೆ ಬೆಂಕಿಯ ಕೆನ್ನಾಲಿಗೆ ಹಾಗೂ ಹೊಗೆ ಮುಗಿಲೆತ್ತರಕ್ಕೆ ಚುಮ್ಮುತ್ತಿತ್ತು. ಸಿಬ್ಬಂದಿ ಹರಸಾಹಸಪಟ್ಟು ಸಂಪೂರ್ಣ ಬೆಂಕಿಯನ್ನು ಮಧ್ಯಾಹ್ನದ ವೇಳೆಗೆ ತಹ ಬಂದಿಗೆ ತರವಲ್ಲಿ ಶ್ರಮಿಸಿದ್ದಾರೆ.
ಆದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗೋದಾಮು ಮಾಜಿ ಸಚಿವ ಶ್ರೀಕಂಠಯ್ಯ ಅವರ ಅಳಿಯ ಕೃಷ್ಣಪ್ಪ ಎಂಬುವವರಿಗೆ ಸೇರಿದ್ದಾಗಿದ್ದು, ಈ ಗೋದಾಮನ್ನು ಶೆಲ್ ಕಂಪನಿಗೆ ಬಾಡಿಗೆಗೆ ನೀಡಲಾಗಿತ್ತು ಎಂದು ಗೊತ್ತಾಗಿದೆ.