ಅಮೃತಸರ : ಪಂಜಾಬ್‌ನ ಅಮೃತಸರ ಜಿಲ್ಲೆಯ ಮಜಿತಾ ಪ್ರದೇಶದ ಐದು ಹಳಿಗಳಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ 14 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನು 6 ಮಂದಿ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಂಗಲಿ, ಪಾತಾಳಪುರಿ, ಮರಾರಿ ಕಲನ್ ಮತ್ತು ಥೆರೆವಾಲ್ ಗ್ರಾಮಗಳಲ್ಲಿ ಸಾವುಗಳು ಸಂಭವಿಸಿವೆ ಇದರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರಾಗಿದ್ದಾರೆ.
ಘಟನೆ ತಿಳಿಯುತ್ತಿದಂತೆ ಕ್ರಮ ಕೈಗೊಂಡು ಪ್ರಮುಖ ಆರೋಪಿಗಳಾದ ಕುಲ್ಬರ್ ಸಿಂಗ್, ಸಾಹಿಬ್ ಸಿಂಗ್, ಗುರ್ಜಂತ್ ಸಿಂಗ್ ,ನಿಂದರ್ ಕೌರ್ ಹಾಗು ಸರಬರಾಜು ಮಾಡಿದ್ದ ಪ್ರಭೀತ್ ಸಿಂಗ್ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಮೃತಸರ ಎಸ್.ಎಸ್‌ಪಿ ಮಣಿಂದರ್ ಸಿಂಗ್ ಹೇಳಿದರು. ಕಳ್ಳಭಟ್ಟಿ ತಯಾರಿಸಲು ಬಳಸಲಾದ ಮೆಥನಾಲ್ ಅನ್ನು ಆನ್‌ಲೈನ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿರುವುದು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಎರಡು ಎಫ್ ಐಆರ್‌ಗಳನ್ನು ದಾಖಲಿಸಲಾಗಿದೆ ಸದ್ಯ ನಾವು ಮದ್ಯ ಸೇವಿಸಿರಬಹುದಾದ ಜನರನ್ನು ಗುರುತಿಸಲು ಮನೆ ಮನೆಗೆ ತೆರಳಿ ಪರಿಶೀಲಿಸುತ್ತಿದ್ದೇವೆ ಎಂದರು. ಅಮೃತಸರ ಉಪ ಆಯುಕ್ತ ಸಾಕ್ಷಿ ಸಾಕ್ಷಿ ಮಾತನಾಡಿ, ಇದೊಂದು ದುರದೃಷ್ಟಕರ ದುರಂತ ಸಂಭವಿಸಿದೆ.ನಾವು ನಮ್ಮ ವೈದ್ಯಕೀಯ ತಂಡಗಳೊಂದಿಗೆ ಧಾವಿಸಿ ಬಂದಿದ್ದೇವೆ.
ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ. ಈ ಸಾವಿನ ಸಂಖ್ಯೆ ಹೆಚ್ಚಾಗದಂತೆ ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದರು ಭಾನುವಾರ ಅಥವಾ ಸೋಮವಾರ ಇವರು ಕಳ್ಳಬಟ್ಟಿ ಸೇವಿಸಿದ್ದಾರೆ ಮತ್ತು ವಾಂತಿ ಮಾಡಲು ಪ್ರಾರಂಭಿಸಿ ಸಾವನ್ನಪ್ಪಿದ್ದಾರೆ. ನಾವು ಸಂತ್ರಸ್ತ ಕುಟುಂಬಗಳಿಗೆ ನೆರವು ಹಾಗು ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಆರೋಪಿ ಪ್ರಜ್ಜಿತ್ ಸಿಂಗ್ 50 ಲೀಟರ್ ಮೆಥನಾಲ್ ಸರಬರಾಜು ಮಾಡಿ ಎರಡು ಲೀಟರ್ ಪ್ಯಾಕೆಟ್‌ಗಳಲ್ಲಿ ಜನರಿಗೆ ಮಾರಾಟ ಮಾಡಿದ್ದ ಎಂದು ಎಸ್‌ಎಸ್‌ಪಿ ಸಿಂಗ್ ಹೇಳಿದರು.ನಾವು ಪ್ರತಿಯೊಂದು ಪ್ಯಾಕೆಟ್ ಅನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.