Tuesday, July 1, 2025
Homeರಾಷ್ಟ್ರೀಯ | National'ಅಪರೇಷನ್ ಸಿಂಧೂರ' ಬರೀ ಟ್ರೈಲರ್ ಅಷ್ಟೇ, ಅಭಿ ಪಿಕ್ಟರ್ ಬಾಕಿ ಪೈ : ಪಾಕಿಸ್ತಾನಕ್ಕೆ ರಾಜನಾಥ್...

‘ಅಪರೇಷನ್ ಸಿಂಧೂರ’ ಬರೀ ಟ್ರೈಲರ್ ಅಷ್ಟೇ, ಅಭಿ ಪಿಕ್ಟರ್ ಬಾಕಿ ಪೈ : ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ವಾರ್ನಿಂಗ್

'Operation Sindoor not over, was just a trailer', says Rajnath Singh

ಭುಚ್ (ಗುಜರಾತ್), ಮೇ 16– ಅಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಈಗ ಏನಾಗಿದೆಯೋ ಅದು ಕೇವಲ ಟ್ರೇಲರ್ ಅಷ್ಟೇ. ಸರಿಯಾದ ಸಮಯ ಬಂದಾಗ ನಾವು ಸಂಪೂರ್ಣವಾದ ಚಿತ್ರಣವನ್ನು ಜಗತ್ತಿಗೇ ತೋರಿಸುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನದ ವಿರುದ್ಧ ಮತ್ತೆ ಅಬ್ಬರಿಸಿದ್ದಾರೆ.

ಗುರುವಾರವಷ್ಟೇ ಶ್ರೀನಗರದ ವಾಯುನೆಲೆಗೆ ಭೇಟಿ ಕೊಟ್ಟ ಬೆನ್ನಲ್ಲೇ ಇಂದು ಗುಜರಾತ್‌ ನ ಭುಚ್ ವಾಯುನೆಲೆಯಲ್ಲಿ ಸೈನಿಕರನ್ನು ಭೇಟಿ ಮಾಡಿ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿದ ಸೇನಾಪಡೆಗಳನ್ನು ಅಭಿನಂದಿಸಿ ಅವರು ಮಾತನಾಡಿದರು.ಅಭಿ ಪಿಕ್ಟರ್ ಬಾಕಿ ಪೈ ಎಂದು ತಮ್ಮ ಭಾಷಣ ಆರಂಭಿಸಿದ ರಾಜನಾಥ್ ಸಿಂಗ್ ಅವರು ತಮ್ಮ ಮಾತಿನುದ್ದಕ್ಕೂ ಪಾಕಿಸ್ತಾನ ಹಾಗೂ ಅವರ ಕೃಪಾಪೋಷಿತ ಉಗ್ರಗಾಮಿ ಸಂಘಟನೆಗಳು ಮತ್ತು ಉಗ್ರರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

ಭಾರತವು ಪಾಕಿಸ್ತಾನವನ್ನು ಪರೀಕ್ಷೆಯಲ್ಲಿರಿಸಿದೆ. ಅವರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಲು ನಾವು ಕಾಲಾವಕಾಶ ನೀಡುತ್ತೇವೆ. ಒಂದು ವೇಳೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದು ಅವರ ನಡವಳಿಕೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಾಕ್ ವಿರುದ್ಧ ನಾವು ವಲ್ಲದ ಮನಸ್ಸಿನಿಂದ ಕದನ ವಿರಾಮ ಒಪ್ಪಿಕೊಂಡಿದ್ದೇವೆ. ಆದರೂ ನಮ್ಮ ನೆರೆಯ ರಾಷ್ಟ್ರ ಜಮ್ಮು-ಕಾಶ್ಮೀರ, ಗುಜರಾತ್, ಪಂಜಾಬ್, ರಾಜಸ್ಥಾನ ಸೇರಿದಂತೆ ಮತ್ತಿತರ ಕಡೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿದರು. ಪಾಕಿಸ್ತಾನದ ನಡವಳಿಕೆ ಮೇಲೆ ಮುಂದಿನ ಎಲ್ಲ ಬೆಳವಣಿಗೆಗಳೂ ನಿಂತಿವೆ. ತಮ್ಮ ತಪ್ಪು ತಿದ್ದಿಕೊಂಡು ಮುನ್ನಡೆದರೆ ಸಮಸ್ಯೆಯಿಲ್ಲ. ನೀವು ಮತ್ತೆ ಹಳೆ ಚಾಳಿಯನ್ನೇ ಪುನರಾವರ್ತಿಸಿದರೆ ಭಾರತ ಕಠಿಣ ಶಿಕ್ಷೆ ನೀಡುವುದು ಗ್ಯಾರಂಟ ಎಂದು ಗುಡುಗಿದರು.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ನಮ್ಮ ಸೇನಾಪಡೆ ನಿಖರ ದಾಳಿ ನಡೆಸಿದೆ. ಪರಿಣಾಮ ನೆರೆರಾಷ್ಟ್ರದ ಎಂಟಕ್ಕೂ ಹೆಚ್ಚು ವಾಯುನೆಲೆಗಳು, ನೂರಕ್ಕೂ ಹೆಚ್ಚು ಉಗ್ರರು, ಹಲವಾರು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿವೆ. ಈ ಪರಾಕ್ರಮದಲ್ಲಿ ಭಾಗಿಯಾದ ಭಾರತೀಯ ಸೇನಾಪಡೆಗಳನ್ನು ನಾನು ಅಭಿನಂದಿಸುತ್ತೇನೆ ನಿಮ್ಮ ಹೋರಾಟ ಪದಗಳಲ್ಲಿ ಬಣ್ಣಿಸಲು ಅಸಾಧ್ಯ ಎಂದು ಶ್ಲಾಘಿಸಿದರು.

ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಅದು ಮುಗಿಯುವುದೂ ಇಲ್ಲ. ಈಗ ನಾವು ಪಾಕಿಸ್ತಾನಕ್ಕೆ ಚಂದ್ರನನ್ನು ತೋರಿಸಿದ್ದೇವೆ. ಮುಂದಿನ ದಿನಗಳಲ್ಲಿ ಮಂಗಳ ಗ್ರಹವನ್ನೂ ತೋರಿಸುವ ಕೆಲಸವನ್ನು ನಮ್ಮ ಸೇನಾಪಡೆ ಮಾಡಲಿದೆ.

ಭಾರತವನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಆಪರೇಷನ್ ಸಿಂಧೂರ ಸಮಯದಲ್ಲಿ ನೀವೆಲ್ಲರೂ ಉತ್ತಮವಾದ ಕೆಲಸ ಮಾಡಿದ್ದೀರಿ, ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವೀರಯೋಧರಿಗೆ ನನ್ನ ಹೃತ್ತೂರ್ವಕವಾದ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಹಾಗೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರು ಆದಷ್ಟು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಪ್ರಾರ್ಥಿಸಿದರು.

ಗುಜರಾತ್‌ನ ಭುಚ್ ವಾಯುನೆಲೆಯು 1965ರಲ್ಲಿ ಪಾಕಿಸ್ತಾನ ವಿರುದ್ದದ ಗೆಲುವಿಗೆ ಸಾಕ್ಷಿಯಾಗಿತ್ತು. ವಿಶೇಷವೆಂದರೆ ಪುನಃ ಅದೇ ವಾಯುನೆಲೆ ಇಂದು ಆಪರೇಷನ್ ಸಿಂಧೂರಕ್ಕೆ ಸಾಕ್ಷಿಯಾಗಿದೆ ಎಂದು ರಾಜನಾಥ್ ಸಿಂಗ್ ಕೊಂಡಾಡಿದರು.

ನೀವು ಶತ್ರುಗಳ ನಾಡಿಗೆ ಹೋಗಿ ಕ್ಷಿಪಣಿಗಳನ್ನು ಎಸೆದಿದ್ದಿರಿ. ಅದರ ಪ್ರತಿಧ್ವನಿ ಕೇವಲ ಭಾರತದ ಗಡಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಜಗತ್ತೇ ಅದನ್ನು ಕೇಳಿದೆ. ಅದು ಕೇವಲ ಕ್ಷಿಪಣಿಗಳ ಧ್ವನಿಯಲ್ಲ, ಸೇನಾಪಡೆಗಳು ಮತ್ತು ಸಶಸ್ತ್ರ ಪಡೆಗಳ ಶೌರ್ಯ ಎಂದು ಕೊಂಡಾಡಿದರು.

ವಿಶ್ವಸಂಸ್ಥೆಗೆ ಮನವಿ:
ಇದೇ ವೇಳೆ ರಾಜನಾಥ್ ಸಿಂಗ್ ತಮ್ಮ ಭಾಷಣದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯು ಪಾಕಿಸ್ತಾನಕ್ಕೆ ಬಿಡುಗಡೆ ಮಾಡಿರುವ ಹಣಕಾಸು ನೆರವಿನ ಬಗ್ಗೆ ವಿಶ್ವಸಂಸ್ಥೆ ನಿಗಾ ವಹಿಸಬೇಕೆಂದು ಅವರು ಮನವಿ ಮಾಡಿದರು.

ವಾಕಿಸ್ತಾನಕ್ಕೆ ಐಎಂಎಫ್ ವಿಸ್ತ್ರತ ನಿಧಿ ಸೌಲಭ್ಯ ಕಾರ್ಯಕ್ರಮದಡಿ 1,023 ಶತಕೋಟಿ ಅಮೆರಿಕನ್ ಡಾಲರ್ ಹಣವನ್ನು ಬಿಡುಗಡೆ ಮಾಡಿದೆ. ಈ ಹಣವನ್ನು ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳ ಪುನಶ್ವೇತನಕ್ಕೆ ಬಳಸಿಕೊಳ್ಳುತ್ತದೆ.

ವಾಕ್ ಭಯೋತ್ಪಾದಕರ ಮೂಲ ಚಟುವಟಿಕೆಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯನ್ನು ಬಳಕೆ ಮಾಡುತ್ತಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರದಿಂದ ಧ್ವಂಸಗೊಂಡಿರುವ ಉಗ್ರರ ಕಟ್ಟಡಗಳ ಪುನಶ್ವೇತನಕ್ಕೆ ಹಣ ಬಳಕೆ ಮಾಡುತ್ತಿದೆ. ಆದ್ದರಿಂದ ವಿಶ್ವ ಸಮುದಾಯ ಈ ರಾಷ್ಟ್ರಕ್ಕೆ ಹಣ ಬಿಡುಗಡೆ ಮಾಡಿರುವ ಅದನ್ನು ಯಾವ ಉದ್ದೇಶಕ್ಕೆ ಬಳಸಿದ್ದೇವೆ ಎಂಬ ಬಗ್ಗೆ ಸ್ಪಷ್ಟನೆ ಕೇಳುವಂತೆ ಒತ್ತಾಯಿಸಿದರು.

ನೀವು ಹಣ ನೀಡುವುದರ ಬಗ್ಗೆ ನಮ್ಮ ಆಕ್ಷೇಪವಿಲ್ಲ, ಅದು ಸದುದ್ದೇಶಕ್ಕೆ ಬಳಕೆಯಾಗಿದೆ ಎಂಬುದನ್ನು ಅವಲೋಕನ ಮಾಡಬೇಕು ಎಂದು ಮನವಿ ಮಾಡಿದರು.

RELATED ARTICLES

Latest News