ಭುವನೇಶ್ವರ, ಮೇ 18- ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಸಿಆರ್‌ಪಿಎಫ್ ಯೋಧ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದಾರೆ.
ಸಿಆರ್‌ಪಿಎಫ್ ಯೋಧ ಗಣೇಶರಾಮ್ ಭೋಯ್ ಒಡಿಸಾದ ಲಾರಂಭಾ ಪೊಲೀಸ್ ಠಾಣೆ ವ್ಯಾಪ್ತಿಯ ಘಾಸಿಯನ್ ಗ್ರಾಮದ ನಿವಾಸಿ. ಕುಟುಂಬ ಸದಸ್ಯರ ಪ್ರಕಾರ, ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಭೋಯ್ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಭೋಯ್ ನಿರ್ಜನ ಸ್ಥಳದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕೆಲವು ಗ್ರಾಮಸ್ಥರು ಗಮನಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಅವರ ಸಾವಿನ ಬಗ್ಗೆ ತನಿಖೆ ಆರಂಭಿಸಿದೆ. ವಿಧಿವಿಜ್ಞಾನ ತಂಡವನ್ನು ಸಹ ಸ್ಥಳಕ್ಕೆ ಕಳುಹಿಸಲಾಗಿದೆ. ಯೋಧನ ನಿರ್ಧಾರಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.