ಬೆಂಗಳೂರು, ಮೇ 20- ಪ್ರತಿ ಭಾರಿ ಮಳೆ ಬಂದಾಗಲೂ ಸಿಲಿಕಾನ್ ಸಿಟಿಯಲ್ಲಿ ಒಂದಲ್ಲ ಒಂದು ಅವಾಂತರ ನಡೆಯೋದು ತಪ್ಪಲ್ಲ, ಮಳೆ ಇಲ್ಲದಿದ್ದರೂ ಹಾಳಾದ ರಸ್ತೆ ಹಾಗೂ ರಸ್ತೆ ಗುಂಡಿ ದುರಸ್ಥಿ ಮಾಡಿಸಲು ಬಿಬಿಎಂಪಿಯವರು ಮುಂದಾಗಲ್ಲ, ಅಂತಹ ಬೇಜವಬ್ದಾರಿ ಬಿಬಿಎಂಪಿಗೆ ತಕ್ಕ ಪಾಠ ಕಲಿಸಲು ಇದೀಗ ಮಹಿಳೆಯೊಬ್ಬರು ಮುಂದೆ ಬಂದಿದ್ದಾರೆ.
ನಗರದ ಹಾಳಾದ ರಸ್ತೆ ಹಾಗೂ ರಸ್ತೆ ಗುಂಡಿಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ನನ್ನ ದೇಹದಲ್ಲಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಹಲವಾರು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ನನ್ನ ಅನಾರೋಗ್ಯಕ್ಕಾಗಿ ನಾನು ಲಕ್ಷಾಂತರ ರೂ. ವೆಚ್ಚ ಮಾಡಿದ್ದು ನನಗೆ ಬಿಬಿಎಂಪಿಯಿಂದ 50 ಲಕ್ಷ ರೂ. ಪರಿಹಾರ ಕೊಡಿಸುವಂತೆ ರಿಚ್ಚಂಡ್ ಟೌನ್ ನಿವಾಸಿ ದಿವ್ಯಾ ಕಿರಣ್ ಎಂಬುವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ.
ನನ್ನ ಕಕ್ಷಿದಾರರು ಆಸ್ಪತ್ರೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಇದಕ್ಕೆ ಕಾರಣ ನಗರದ ರಸ್ತೆ ಹಾಗೂ ರಸ್ತೆ ಗುಂಡಿಗಳೇ ಕಾರಣ. ಅವರು ಬಿಬಿಎಂಪಿ ತೆರಿಗೆ ಪಾವತಿದಾರರಾಗಿರುವುದರಿಂದ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ವಕೀಲ ಕೆ.ವಿ. ಲ್ಯಾವಿನ್ ಎನ್ನುವವರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ನೋಟೀಸ್ ನೀಡಿದ್ದಾರೆ.
15 ದಿನಗಳ ಒಳಗೆ ನೀವು ನನ್ನ ಕಕ್ಷಿದಾರರಾದ ದಿವ್ಯಾ ಕಿರಣ್ ಅವರಿಗೆ ಪರಿಹಾರ ಧನ ನೀಡಬೇಕು ಇಲ್ಲದಿದ್ದರೆ ನಾವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮಾತ್ರವಲ್ಲ, ನಗರದ ಇಂದಿನ ದುಸ್ಥಿತಿ ಬಗ್ಗೆ ಲೋಕಾಯುಕ್ತ ಮತ್ತಿತರ ತನಿಖಾ ಸಂಸ್ಥೆಗಳಿಗೂ ದೂರು ನೀಡುವುದಾಗಿ ಅವರು ತಮ್ಮ ನೋಟೀಸ್‌ನಲ್ಲಿ ಎಚ್ಚರಿಸಿದ್ದಾರೆ.