ಬೆಂಗಳೂರು, ಮೇ 22- ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ನ್ಯಾಯಾಂಗ ಬಂಧನದಲ್ಲಿರುವ ರನ್ಯಾರಾವ್ ಅವರ 40 ಲಕ್ಷ ಕ್ರೆಡಿಡ್ ಕಾರ್ಡ್ ಬಿಲ್ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಪಾವತಿ ಮಾಡಿರುವ ಆರೋಪ ಕುರಿತು ತಾವು ತಕ್ಷಣಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಿನ್ನೆ ಜಾರಿ ನಿರ್ದೇಶನಾಲಯದ ಅಽಕಾರಿಗಳು ನಮ್ಮ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು ಹಾಗೂ ಬೇಗೂರಿನಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಈ ಮೂರು ಶಿಕ್ಷಣ ಸಂಸ್ಥೆಗಳ ಜೊತೆಗೆ ಸಿದ್ಧಾರ್ಥ ಅಕಾಡೆಮಿ ಆ್ ಹೈಯರ್ ಎಜುಕೇಷನ್ ಎಂಬ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಅಽಕಾರಿ ಹಾಗೂ ಸಿಬ್ಬಂದಿಗಳಿಗೆ ಜಾರಿ ನಿರ್ದೇಶನಾಲಯದ ಅಽಕಾರಿಗಳಿಗೆ ಸಹಕರಿಸಲು ಸೂಚನೆ ನೀಡಿದ್ದೇನೆ ಎಂದರು.
ಶೈಕ್ಷಣಿಕ ಸಂಸ್ಥೆಗಳ ಕುರಿತಂತೆ ಇಡಿ ಅಽಕಾರಿಗಳು ಏನನ್ನು ಕೇಳುತ್ತಾರೋ ಅದನ್ನೆಲ್ಲಾ ಒದಗಿಸಲು ಸೂಚನೆ ನೀಡಲಾಗಿದೆ. ಈ ವರ್ಷ ಇನ್ನೂ ಆಡಿಟ್ ನಡೆದಿಲ್ಲ. ಆಡಿಟ್ ಆಗಿರುವ ಎಲ್ಲಾ ದಾಖಲೆಗಳನ್ನೂ ಒದಗಿಸುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಜಾರಿ ನಿರ್ದೇಶನಾಲಯದ ಅಽಕಾರಿಗಳು ಕೆಲ ಮಾಹಿತಿಗಳನ್ನು ಕಲೆ ಹಾಕಿ, ನಮ್ಮ ಅಕೌಂಟ್‌್ಸ ವಿಭಾಗವನ್ನು ಪ್ರಶ್ನಿಸಿದ್ದಾರೆ. ಯಾವ ಉದ್ದೇಶಕ್ಕೆ ಬಂದಿದ್ದಾರೆ ಎಂದು ಗೊತ್ತಿಲ್ಲ. ನಾವಂತೂ ಯಾವುದನ್ನೂ ಮುಚ್ಚಿಡುವುದಿಲ್ಲ, ಎಲ್ಲಾ ಮಾಹಿತಿ ಒದಗಿಸುತ್ತೇವೆ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಅದನ್ನು ಗೌರವಿಸುತ್ತೇನೆ ಎಂದರು.
ಈವರೆಗೂ ನನ್ನನ್ನು ಪ್ರಶ್ನಿಸಿಲ್ಲ. ಈ ನೆಲದ ಕಾನೂನಿನ ಮೇಲೆ ನಂಬಿಕೆ ಇಡುವ ವ್ಯಕ್ತಿಯಾಗಿ ಪರಿಶೀಲನೆಯಲ್ಲಿ ಏನು ಬರುತ್ತದೋ ಅದಕ್ಕೆ ಸಹಕರಿಸುತ್ತೇನೆ ಮತ್ತು ಸಿದ್ಧನಿದ್ದೇನೆ. ಇಲ್ಲಿ ವೈಯಕ್ತಿಕ ವಿಚಾರಗಳಿಲ್ಲ, ಸಿದ್ಧಾರ್ಥ ಒಂದು ಶಿಕ್ಷಣ ಸಂಸ್ಥೆ ಎಂದರು.
ಸುಮಾರು 60 ವರ್ಷಗಳಿಂದಲೂ ಸಿದ್ಧಾರ್ಥ ಸಂಸ್ಥೆ ನಡೆಯುತ್ತಿದೆ. 35 ವರ್ಷಗಳಲ್ಲಿ 40 ಸಾವಿರ ಇಂಜಿನಿಯರ್‌ಗಳು, 10 ಸಾವಿರ ವೈದ್ಯರು ಹೊರ ಬಂದಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ನಮ್ಮದು ಒಂದು ಅಳಿಲು ಸೇವೆಯಿದೆ. ನಾವು ನಮ್ಮ ಸಂಸ್ಥೆಯನ್ನು ಬೆಳಸಬೇಕಲ್ಲವೇ ? ಅದರಲ್ಲಿ ತಪ್ಪೇನಿದೆ ? ಎಂದರು.ನಮ್ಮದೇ ಪಕ್ಷದ ಮಾಜಿ ಶಾಸಕ ಶಫಿ ಅಹಮ್ಮದ್ ಅವರು ತಮ್ಮ ಬಳಿ ಬಂದು ಹೆಚ್‌ಎಂಎಸ್ ಶಿಕ್ಷಣ ಸಂಸ್ಥೆ ನಷ್ಟದಲ್ಲಿದೆ. ಮುಚ್ಚಿ ಬಿಡುವ ಸ್ಥಿತಿಯಲ್ಲಿದೆ. ಅದನ್ನು ನೀವು ತೆಗೆದುಕೊಂಡು ಮುನ್ನೆಡೆಸಿ ಎಂದು ಕೇಳಿಕೊಂಡರು. ಅದರಂತೆ ನಾವು ಅದನ್ನು ಖರೀದಿಸಿ ಪುನಶ್ಚೇತನಗೊಳಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.
ರನ್ಯಾರಾವ್ ಅವರ ಕ್ರೆಡಿಟ್ ಕಾರ್ಡ್‌ನ 40 ಲಕ್ಷ ಬಿಲ್ ಅನ್ನು ಸಂಸ್ಥೆಯಿಂದ ಪಾವತಿಯಾಗಿರುವುದಕ್ಕೆ ಸಂಬಂಽಸಿದಂತೆ ಈ ಪರಿಶೀಲನೆ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಲಯ ನಿನ್ನೆ ರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವುದು ನನಗೆ ಗೊತ್ತಿಲ್ಲ. ಅದರ ಬಗ್ಗೆ ಈ ಹಂತದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ಮೊದಲು ತನಿಖೆ ಮುಗಿಯಲಿ, ವರದಿ ಬರಲಿ. ಅದಕ್ಕೂ ಮುನ್ನಾ ಅನಗತ್ಯವಾಗಿ ನಾನು ಹೇಳಿಕೆ ನೀಡುವುದಿಲ್ಲ ಎಂದರು.ಬಿಜೆಪಿಯವರು ಆರೋಪಗಳನ್ನು ಮಾಡುತ್ತಿದ್ದಾರೆ. ಮಾಡಲಿ, ಆರೋಪಗಳು ಸತ್ಯ ಎಂದು ಸಾಬೀತಾಗುವುದು ತನಿಖೆಯ ಬಳಿಕವಲ್ಲವೇ ? ಹೀಗಾಗಿ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ತನಿಖೆ ಮುಗಿಯುವವರೆಗೂ ಅನಗತ್ಯವಾಗಿ ವದಂತಿಗಳನ್ನು ಹರಡಬೇಡಿ ಎಂದು ಮನವಿ ಮಾಡಿಕೊಂಡರು.
ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ದಾಳಿ ನಡೆಸಿದೆ ಎಂದು ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ನಾಯಕರು ಮಾಡಿರುವ ವ್ಯಾಖ್ಯಾನಗಳಿಗೂ ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ. ನಾನೇನಾದರೂ ಹೇಳಿದರೆ, ಇಡಿಯವರು ಜಾತಿ ನೋಡಿಕೊಂಡು ಬರುತ್ತಾರೆಯೇ ಎಂಬ ಪ್ರತಿಕ್ರಿಯೆ ಬರುತ್ತದೆ. ಮೊದಲು ತನಿಖಾ ವರದಿ ಹೊರ ಬರಲಿ, ಅದಕ್ಕೂ ಮುನ್ನಾ ಮಾತನಾಡುವುದು ಸೂಕ್ತವಲ್ಲ ಎಂದು ಪುನರುಚ್ಚರಿಸಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು. ಮುಂದೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬ ಕಾರಣಕ್ಕೆ ಪರಮೇಶ್ವರ್ ಅವರ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಆರೋಪಗಳಿಗೂ ನಾನು ಈಗ ಪ್ರತಿಕ್ರಿಯಿಸುವುದಿಲ್ಲ. ಅದಕ್ಕೆಲ್ಲಾ ಮುಂದೊಂದು ಕಾಲ ಬರಲಿದೆ ಎಂದರು.
ಮಾಜಿ ಶಾಸಕರಿಂದ ಹೆಚ್‌ಎಂಎಸ್ ಶಿಕ್ಷಣ ಸಂಸ್ಥೆಯನ್ನು ಖರೀದಿಸುವಾಗ ಭೂಮಿಯ ಬೆಲೆಯನ್ನು ನಿಗದಿತ ವೌಲ್ಯಕ್ಕಿಂತ ಕಡಿಮೆ ನಮೂದಿಸಲಾಗಿದೆ ಎಂಬ ಆರೋಪ ಕುರಿತು ಉತ್ತರಿಸಿದ ಅವರು, ಇದನ್ನೆಲ್ಲಾ ನೋಡಲು ಪ್ರತ್ಯೇಕ ವ್ಯವಸ್ಥೆ ಇದೆ. ಕಂದಾಯ ಇಲಾಖೆಯ ಸಬ್ ರಿಜಿಸ್ಟಾರ್ ವೌಲ್ಯಮಾಪನ ಮಾಡುತ್ತಾರೆ. ಹೆಚ್‌ಎಂಎಸ್ ಮತ್ತು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ನಡುವೆ ನ್ಯಾಯ ಸಮ್ಮತ ವ್ಯವಹಾರ ನಡೆದಿದೆ ಎಂದು ಹೇಳಿದರು.
ಏನಾದರೂ ಲೋಪಗಳಾಗಿದ್ದರೆ ಅದನ್ನು ಪತ್ತೆ ಹಚ್ಚಲಿ. ಸದ್ಯಕ್ಕೆ ನಾನು ಏನ್ನನ್ನೂ ಹೇಳಲು ಬಯಸುವುದಿಲ್ಲ ಎಂದು ಹೇಳಿ ಜಾರಿಕೊಂಡರು.