Thursday, May 29, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಭಾರೀ ಮಳೆಯಿಂದ ಶಿರಾಡಿಘಾಟ್‌ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಸಂಚಾರದಲ್ಲಿ ವ್ಯತ್ಯಯ

ಭಾರೀ ಮಳೆಯಿಂದ ಶಿರಾಡಿಘಾಟ್‌ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಸಂಚಾರದಲ್ಲಿ ವ್ಯತ್ಯಯ

Heavy rains cause landslides on Shiradighat highway, disrupting traffic

ಹಾಸನ, ಮೇ 26- ಕಳೆದ ಮೂತ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್‌ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎರಡು ಕಡೆ ಗುಡ್ಡ ಕುಸಿದಿದ್ದು, ಸಂಚಾರದಲ್ಲಿ ವ್ಯತ್ಯಯವಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಜಿಲ್ಲೆಯ ಚನ್ನರಾಯಪಟ್ಟಣ, ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಮತ್ತು ಹಾಸನ ತಾಲೂಕಿನಲ್ಲಿ ಮಳೆಯ ಅಬ್ಬರದಿಂದಾಗಿ ರೈತರು, ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ.

ಬೇಲೂರು ತಾಲೂಕಿನ ಕುಪ್ರೋಡು ಗ್ರಾಮದಲ್ಲಿ ಕೆರೆಕೋಡಿ ಹೊಡೆದು ರೈತರ ಜಮೀನಿಗೆ ನೀರನ್ನು ಬಿದ್ದು ಸುಮಾರು ಐವತ್ತಕ್ಕೂ ಹೆಚ್ಚು ಎಕರೆ ಪ್ರದೇಶದ ಗದ್ದೆ ಮತ್ತು ತೆಂಗಿನ ತೋಟಗಳಿಗೆ ಹಾನಿಯಾಗಿದೆ. ತರಕಾರಿ ಬೆಳೆಗಳು ಸಹ ಜಲಾವೃತವಾಗಿದ್ದು ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಬೆಳಿಗ್ಗೆಯಿಂದ ಬಿರುಸಿನ ಗಾಳಿಯ ಜೊತೆಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಸಕಲೇಶಪುರ ಬೇಲೂರು ತಾಲೂಕುಗಳ ಹಲವು ಗ್ರಾಮಗಳಲ್ಲಿ ವಿದ್ಯುತ್‌ ಕಂಬ ಮರ ನೆಲಕ್ಕುರುಳಿದ್ದು ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಯ ಕಾರಣ ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾರೆ. ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳ ಹೆಗ್ಗೋವೆ, ಹೊಂಕರವಳ್ಳಿ, ಕೆ.ಹೊಸಕೋಟೆ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ವಿಪರೀತ ಮಳೆಯಾಗಿದ್ದು ಕಾಫಿ ತೋಟ ಸೇರಿದಂತೆ ರಸ್ತೆ ಬದಿಯ ಮರಗಳು ಧರೆಗುರುಳಿವೆ. ಕೆಳವಳ್ಳಿ ಬಳಿ ಬಿದಿರಿನ ಸಾಲು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತ :
ಮಂಗಳೂರಿಗೆ ಪ್ರಮುಖ ಸಂಪರ್ಕ ರಸ್ತೆ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎರಡು ಕಡೆ ಭೂಕುಸಿತ ಉಂಟಾಗಿದೆ. ಬೆಂಗಳೂರು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ತಡೆಗೋಡೆ ಇದ್ದರೂ ಮಣ್ಣು ಕುಸಿಯುತ್ತಿದ್ದು ಒಂದು ಬದಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ವಾಹನ ದಟ್ಟಣೆಯಿಂದಾಗಿ ನೂರಾರು ವಾಹನಗಳು ನಿಂತಲ್ಲೇ ನಿಂತಿದ್ದು ಟ್ರಾಫಿಕ್ ಜಾಮ್ ಉಂಟಾಗಿದ್ದು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸಲು ಹರಸಾಹಸ ನಡೆಸಿದರು. ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜನಜೀವನ ಅಸ್ತವ್ಯಸ್ತ:
ಧಾರಾಕಾರ ಮಳೆಯ ಕಾರಣ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಲೆನಾಡಿನಲ್ಲಂತೂ ಬೆಳಗ್ಗೆಯಿಂದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜನರ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಕಾಫಿ ತೋಟಗಳಲ್ಲಿ ಮರಗಳು ಧರೆಗುರುಳಿದ್ದು ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಜಿಲ್ಲಾಡಳಿತದ ಪೂರ್ವ ಸೂಚನೆಯಂತೆ ಮಳೆಯ ತೀವ್ರತೆಯಿಂದಾಗಿ ಸ್ಥಳೀಯ ಆಡಳಿತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದು ರೈತರಿಗೆ ಪರಿಹಾರ ಮತ್ತು ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಕ್ರಮಗಳಿಗೆ ಸ್ಥಳೀಯ ಆಡಳಿತ ಮುಂದಾಗಿದೆ.

RELATED ARTICLES

Latest News