ಬೆಂಗಳೂರು,ಮೇ27- ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಅರೆಬೈಲು ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಕೇಂದ್ರದ ಶಿಸ್ತು ಕ್ರಮದ ಕುರಿತು ಪಕ್ಷದೊಳಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಇಬ್ಬರನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಿರುವ ಕೇಂದ್ರದ ಶಿಸ್ತು ಸಮಿತಿ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ವಾಗತಿಸಿದ್ದಾರೆ.
ಆದರೆ ಉಚ್ಚಾಟನೆಗೊಂಡಿರುವ ಶಿವರಾಜ್ ಹೆಬ್ಬಾರ್ ಮತ್ತು ಸೋಮಶೇಖರ್ ಇಬ್ಬರೂ, ನಾವು ಇದನ್ನು ನಿರೀಕ್ಷೆ ಮಾಡಿದ್ದೆವು. ವರ್ಷದ ಹಿಂದೆ ನಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಸುಳಿವು ಸಿಕ್ಕಿತ್ತು. ನಮ್ಮ ಮುಂದಿನ ರಾಜಕೀಯ ನಡೆಯನ್ನು ಕಾದು ನೋಡಿ ಎಂದು ಕುತೂಹಲ ಕೆರಳಿಸಿದ್ದಾರೆ.
ಇದಕ್ಕೆ ಠಕ್ಕರ್ ಎನ್ನುವಂತೆ ಮಾಜಿ ಸಚಿವ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಪಕ್ಷಗಿಂತ ಯಾರು ದೊಡ್ಡವರಲ್ಲ, ಪಕ್ಷದ ವಿರೋಧಿ ಚಟುವಟಿಕೆ ನಡೆಸುವವರು ಎಷ್ಟೇ ದೊಡ್ಡವರಾದರೂ ಸಹಿಸುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಉಚ್ಚಾಟನೆಗೆ ಮನವಿ :
ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರುಗಳು ಬಹಿರಂಗವಾಗಿಯೇ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಾರೆ ಎಂಬುದು ಅವರಿಗೂ ಗೊತ್ತಿತ್ತು. ಹೀಗಾಗಿ ಈ ಇಬ್ಬರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕೆಂದು ವರಿಷ್ಠರಿಗೆ ಮನವಿ ಮಾಡಿದ್ದೆವು. ಪಕ್ಷದ ನಿರ್ಧಾರವನ್ನು ಸ್ವಾಗತಿಸುವುದಾಗಿ ವಿಜಯೇಂದ್ರ ಹೇಳಿದರು.
BIG BREAKING : ಬಿಜೆಪಿಯಿಂದ ಶಾಸಕರಾದ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಉಚ್ಚಾಟನೆ
ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ. ತಪ್ಪು ಮಾಡಿದವರು ಎಷ್ಟೇ ದೊಡ್ಡವರಾದರೂ ಸಹಿಸುವುದಿಲ್ಲ. ಹಲವು ಬಾರಿ ತಪ್ಪು ಸರಿಪಡಿಸಿಕೊಳ್ಳುವಂತೆ ಸೂಚ್ಯವಾಗಿ ಹೇಳಿದ್ದರೂ ಸರಿಪಡಿಸಿಕೊಂಡಿಲ್ಲ. ಹೀಗಾಗಿ ವರಿಷ್ಟರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಸ್ವಾಗತ :
ಪಕ್ಷದಿಂದ ಉಚ್ಚಾಟನೆ ಮಾಡಿರುವ ಕೇಂದ್ರ ಶಿಸ್ತು ಸಮಿತಿಯ ತೀರ್ಮಾನವನ್ನು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಸ್ವಾಗತಿಸಿದ್ದಾರೆ.
ಶಿವರಾಮ್ ಹೆಬ್ಬಾರ್ ಸೋಮಶೇಖರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದು ತಪ್ಪು. ನಮ್ಮ ಪಕ್ಷದ ಚಿಹ್ನೆ ಯಡಿ ಗೆದ್ದು ಬೇರೆ ಪಕ್ಷದವರ ಜೊತೆ ಗುರುತಿಸಿಕೊಂಡರೆ ಯಾರೂ ಸಹಿಸುವುದಿಲ್ಲ. ಇಬ್ಬರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದೆವು. ತಡವಾದರೂ ವರಿಷ್ಠರು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದರು.
ಉಚ್ಚಾಟನೆ ಮಾಡಿರುವುದು ನಮ್ಮ ಪಕ್ಷದ ಆಂತರಿಕ ವಿಚಾರ. ಇದರ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಲೆಕೆಡಿಸಿಕೊಳ್ಳುವುದು ಬೇಡ. ನಮ್ಮಲ್ಲಿ ಮುತ್ತುರತ್ನಗಳಿವೆಯೋ ಅಥವಾ ಕೊಹಿನೂರು ವಜ್ರಗಳಿವೆಯೋ ಎಂಬುದನ್ನು ಪಕ್ಷ ನೋಡಿಕೊಳ್ಳುತ್ತದೆ. ಮೊದಲು ಕಾಂಗ್ರೆಸ್ ಪಕ್ಷದಲ್ಲಿರುವವರ ಬಗ್ಗೆ ಮಹಾನಾಯಕರು ನೋಡಿಕೊಳ್ಳಲಿ ಎಂದು ರವಿ ತಿರುಗೇಟು ಕೊಟ್ಟರು.
ಒಳ್ಳೆಯದೇ ಆಯಿತು :
ಇನ್ನು ಉಚ್ಚಾಟನೆ ಕುರಿತು ಪ್ರತಿಕ್ರಿಯಿಸಿರುವ ಶಿವರಾಮ್ ಹೆಬ್ಬಾರ್. ನಮ್ಮನ್ನು ಬಿಜೆಪಿಯಿಂದ ಉಚ್ಚಾಟಿಸಿದ್ದು ಒಳ್ಳೆಯದೇ ಆಯಿತು. ನಾವೇನೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರಲಿಲ್ಲ. ಪಕ್ಷದಲ್ಲಿ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಕ್ಷೇತ್ರದ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ ಕಾಂಗ್ರೆಸ್‌ಗೆ ಕೆಲವು ವಿಷಯಗಳಲ್ಲಿ ಬೆಂಬಲ ಸೂಚಿಸಿದ್ದೆವು. ನಮ್ಮನ್ನು ಪಕ್ಷ ವಿರೋಧಿ ಚಟುವಟಿಕೆಯಿಂದ ಉಚ್ಚಾಟಿಸುವುದಾದರೆ ಉಳಿದವರ ಕಥೆ ಏನು ಎಂದು ಪ್ರಶ್ನಿಸಿದರು.