ಬೆಳಗಾವಿ,ನ.13- ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಮೀಕ್ಷಾ ವರದಿ ಡಿ.15ಕ್ಕೆ ಸಲ್ಲಿಕೆಯಾಗುವ ನಿರೀಕ್ಷೆಯಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಗಳು ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ಅಧ್ಯಕ್ಷತೆಯ ಆಯೋಗದ ವರದಿಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಮೊದಲು ಅದು ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಅದರಲ್ಲಿರುವ ಶಬ್ದಗಳೇನು, ಅಂಕಿಸಂಖ್ಯೆಗಳೇನು ಎಂಬ ಬಗ್ಗೆ ಸಾರ್ವಜನಿಕವಾಗಿ ಸದನದಲ್ಲಿ ಚರ್ಚೆಯಾಗಬೇಕು. ಎಲ್ಲರು ಒಪ್ಪಿದರೆ ವರದಿ ಅಂಗೀಕಾರವಾಗುತ್ತದೆ. ಇಲ್ಲವಾದರೆ ತಿರಸ್ಕಾರಗೊಳ್ಳಲಿದೆ. ಎಲ್ಲದಕ್ಕಿಂತ ಮೊದಲು ಅದರ ಬಗ್ಗೆ ಚರ್ಚೆ ಅಗತ್ಯ ಎಂದರು.
ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡನೆಯಾಗುವ ಸಾಧ್ಯತೆಗಳು ತೀವ್ರ ಕಡಿಮೆಯಿದೆ. ಡಿ.15ಕ್ಕೆ ವರದಿ ಸಲ್ಲಿಕೆಯಾಗಬಹುದು ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಸಚಿವರಿಗೆ ಈವರೆಗೂ ಹೈಕಮಾಂಡ್ ಸೂಚನೆ ಮಾಡಿಲ್ಲ. ಹಾಗಾಗಿ ಸಚಿವರ ಸ್ಪರ್ಧೆ ಇಲ್ಲ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಆಸಕ್ತರಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಮೊದಲು ಅರ್ಜಿ ಸಲ್ಲಿಕೆಯಾಗಬೇಕು. ಆನಂತರ ನಿಗದಿತ ಮಾನದಂಡಗಳನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ
ಆಕಾಂಕ್ಷಿಗಳು ಸಮುದಾಯದಲ್ಲಿ ಜನಪ್ರಿಯತೆ ಹೊಂದಿರಬೇಕು, ಪಕ್ಷನಿಷ್ಠರಾಗಿರಬೇಕು, ಹೈಕಮಾಂಡ್ ಪರಿಗಣಿಸಬೇಕು. ಅಂಥವರನ್ನು ಆಯ್ಕೆ ಮಾಡಲಾಗುತ್ತದೆ. ಬೆಳಗಾವಿ ಲೋಕಸಭೆಗೆ ಲಿಂಗಾಯಿತ ಸಮುದಾಯದ ಬಗ್ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮುದಾಯದಲ್ಲಿ ಟಿಕೆಟ್‍ನೀಡುವ ಚರ್ಚೆಗಳಾಗಿವೆ. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬ ಈವರೆಗೂ ಟಿಕೆಟ್ ಕೇಳಿಲಿಲ್ಲ ಎಂದು ಸ್ಪಷ್ಟಪಡಿಸಿದರು. ನಿಗಮಮಂಡಳಿ ನೇಮಕಾತಿಗೆ ಪಂಚರಾಜ್ಯಗಳ ಚುನಾವಣೆ ಮತ್ತು ವಿಧಾನಮಂಡಲದ ಅಧಿವೇಶನದ ಬಳಿಕ ಪ್ರಕ್ರಿಯೆ ನಡೆಯಲಿದೆ ಎಂದರು.
ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ತಾವು ಎಲ್ಲಿಯೂ ಹೇಳಿಕೆ ನೀಡಿಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಮುಖ್ಯಮಂತ್ರಿಯಾಗುವ ಬಗ್ಗೆ ಯಾವುದೇ ಆತುರವಿಲ್ಲ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಬೇಕು. ಆ ವೇಳೆ ಹೈಕಮಾಂಡ್ ನಾಯಕತ್ವವನ್ನು ಗುರುತಿಸಿದಾಗ ಮಾತ್ರ ತಾವು ಪ್ರಯತ್ನಿಸುವುದಾಗಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದೇವೆ. ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಲು ತಾವು ಸದ್ಯಕ್ಕೆ ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು.