Thursday, December 7, 2023
Homeರಾಜ್ಯದೀಪಾವಳಿ 'ಗಿಫ್ಟ್' ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ

ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ

ಬೆಂಗಳೂರು, ನ.13- ದೀಪಾವಳಿಗೆ ನಿಗಮ ಮಂಡಳಿಗಳ ನೇಮಕಾತಿಯ ಉಡುಗೊರೆ ಸಿಗಲಿದೆ ಎಂದು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಶೆಯಾಗಿದ್ದು, ಮತ್ತೆ ಹೊಸ ವರ್ಷದ ಬಂಪರ್ ಆಫರ್‍ನ ಆಸೆ ತೋರಿಸಲಾಗುತ್ತಿದೆ.ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದಿದೆ, ಸಚಿವರು ದರ್ಬಾರ್ ನಡೆಸುತ್ತಿದ್ದಾರೆ. ಹಿರಿಯ ಶಾಸಕರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಕಿರಿಯ ಶಾಸಕರು ನಿಗಮ ಮಂಡಳಿಗಳಲ್ಲಿಯಾದರೂ ಅವಕಾಶ ಸಿಗಬಹುದು ಎಂದು ಕಾದು ಕುಳಿತಿದ್ದಾರೆ. ಅತ್ತ ಪಕ್ಷವನ್ನು ಅಧಿಕಾರಕ್ಕೆ ತರಲು ತನು, ಮನ, ಧನಪೂರ್ವಕವಾಗಿ ಯೋಧರಂತೆ ಶ್ರಮಿಸಿದ ಕಾರ್ಯಕರ್ತರು ಯಾರೇ ಅಧಿಕಾರದಲ್ಲಿದ್ದರೂ ನಮ್ಮ ಹಣೆಯ ಬರಹ ಇಷ್ಟೆ ಎಂದು ಸಿನಿಕತನಕ್ಕೆ ಜಾರಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಕಿರುಕೂಳಗಳಿಗೆ ಎದೆ ಕೊಟ್ಟು ಹೋರಾಟ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದಲ್ಲಿ ಅನಾಥ ಪ್ರಜ್ಞೆಯಿಂದ ನರಳುತ್ತಿದ್ದಾರೆ ಎಂಬ ಅಸಮಧಾನಗಳು ಕೇಳಿ ಬರುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಕಾರ್ಯಕರ್ತರೇ ಮೊದಲು, ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪ್ರತಿ ಕಾರ್ಯಕ್ರಮದಲ್ಲೂ ಒತ್ತಿ ಹೇಳುತ್ತಿದ್ದಾರೆ. ಆದರೆ ಅವರ ಮಾತುಗಳು ಹೇಳಿಕೆಗಳಿಗಷ್ಟೆ ಸೀಮಿತವಾಗಿವೆ. ಮೂಗಿಗೆ ತುಪ್ಪ ಸವರಿ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡದಾಗಿ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ. ಪಕ್ಷ ನಿಷ್ಠರಾದ ಡಿ.ಕೆ.ಶಿವಕುಮಾರ್ ಅವರ ಮಾತುಗಳನ್ನು ಕೇಳಿದರೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಬಾಳು ಬಂಗಾರವಾಯಿತು ಎಂದು ಖುಷಿ ಪಡಬೇಕು, ಆದರೆ ಆ ಖುಷಿ ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಅಸಹನೆಗಳು ಸಾಮಾನ್ಯವಾಗಿದೆ.

ಸಚಿವರಂತೂ ತಮ್ಮನ್ನು ತಾವು ರಾಜ ಮಹಾರಾಜರು ಎಂದುಕೊಂಡಿದ್ದಾರೆ. ಅವರ ಸುತ್ತಮುತ್ತಾ ಇರುವ ಸಿಬ್ಬಂದಿಗಳು, ಅಧಿಕಾರಿಗಳು, ಗನ್ ಮ್ಯಾನ್‍ಗಳದೇ ದರ್ಬಾರ್ ಆಗಿದೆ. ಒಂದಿಬ್ಬರು ಸಚಿವರನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಮಂತ್ರಿಗಳ ಕಚೇರಿಗಳಲ್ಲಿ ಮಧ್ಯವರ್ತಿಗಳು, ಅಧಿಕಾರಿಗಳದೇ ದರ್ಬಾರ್ ಆಗಿದೆ.

ಸಾಮಾನ್ಯ ಕಾರ್ಯಕರ್ತರ ಪಾಡು ಹೇಳ ತೀರದಾಗಿದೆ. ಬ್ಲಾಕ್, ಜಿಲ್ಲಾಧ್ಯಕ್ಷರ ಮಾತಿಗೂ ಸಚಿವರ ಕಚೇರಿಗಳಲ್ಲಿ ಬೆಲೆ ಇಲ್ಲವಾಗಿದೆ. ವೈಯಕ್ತಿಕ ಕೆಲಸಗಳಿಗೆ ಅಗತ್ಯ ಬೆಲೆಯನ್ನು ಸಂದಾಯ ಮಾಡಲೇಬೇಕು, ಇನ್ನೂ ಕೆಲ ಸಚಿವರು ಸಾರ್ವಜನಿಕ ಸಮಸ್ಯೆಗಳು ಹಾಗೂ ಕೆಲಸಗಳಿಗೂ ಕೈ ಬಾಯಿ ನೋಡುತ್ತಿರುತ್ತಾರೆ. ಅಧಿಕಾರಿಗಳು ಬರಿಗೈನಲ್ಲೇ ಬರುತ್ತಿರಾ ಎಂದು ನೇರವಾಗಿ ಮಾತನಾಡುತ್ತಿದ್ದಾರೆ ಎಂಬ ಆಕ್ಷೇಪಗಳಿವೆ.

ಪ್ರತಿಯೊಬ್ಬ ಸಚಿವರ ಮನೆಯ ಮುಂದೆಯೂ ನೂರೈವತ್ತರಿಂದ 300 ಮಂದಿ ಮಂದಿ ಠಳಾಯಿಸಿರುತ್ತಾರೆ. ಅವರಲ್ಲಿ ಶೇ.50ರಷ್ಟು ಮಂದಿ ಮಧ್ಯವರ್ತಿಗಳಿದ್ದರೆ, ಶೇ.40ರಷ್ಟು ಅಧಿಕಾರಿಗಳು, ಉಳಿದ ಶೇ.10ರಷ್ಟು ಕಾರ್ಯಕರ್ತರು.

ದೀಪಾವಳಿ ಪೂಜೆ ವೇಳೆ ಮೀನುಗಾರರ ದೋಣಿಗಳು ಬೆಂಕಿಗಾಹುತಿ

ಮಧ್ಯವರ್ತಿಗಳಲ್ಲಿ ಹಿಂದಿನ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದವರ ಪ್ರಮಾಣವೇ ಹೆಚ್ಚು ಕಾಣುತ್ತಿದೆ. ಠಾಕುಠೀಕಾಗಿ ಬಟ್ಟೆ ಧರಿಸಿ ತಿರುಗಾಡುವ ಪಿಆರ್ ಏಜೆನ್ಸಿಗಳ ಪ್ರತಿನಿಧಿಗಳು ಕಡ್ಡಾಯವಾಗಿ ಕಾಣಸಿಗುತ್ತಾರೆ. ಸಚಿವರ ಭೇಟಿಗೆ ಮೊದಲ ಆದತೆ ಲಾಭ ಮಾಡಿಕೊಡುವವರಿಗೆ ಸಿಗುತ್ತಿದೆ. ಸಮಯ ಉಳಿದರೆ ಕಾರ್ಯಕರ್ತರ ಮನವಿಗಳನ್ನು ಸಚಿವರು ಕಸಿದುಕೊಂಡು ಕಾರು ಏರುತ್ತಾರೆ ಎಂದು ಹೇಳಲಾಗುತ್ತಿದೆ.

2013ರಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಾಗಲೂ ನಿಗಮ ಮಂಡಳಿಗಳ ನೇಮಕಾತಿಗೆ ಒಂದುವರೆ ವರ್ಷ ತಡ ಮಾಡಲಾಗಿತ್ತು. ಪ್ರಸ್ತುತ ಸರ್ಕಾರದಲ್ಲೂ ಅದೇ ನಡೆಯಬಹುದೇನೋ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡುತ್ತಿದೆ. ಆಡಳಿತ ವೆಚ್ಚ ತಗ್ಗಿಸುವ ನೆಪವೊಡ್ಡಿ ನೇಮಕಾತಿಯನ್ನು ಮುಂದೂಡಲಾಗುತ್ತಿದೆ. ಆದರೆ ಮತ್ತೊಂದೆಡೆ ಸಚಿವರು ಹೊಸ ಕಾರ್ ಖರೀದಿ, ಮನೆ, ಕಚೇರಿಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿಗಳ ಖರ್ಚು ಮಾಡಲಾಗುತ್ತಿದೆ. ಸರ್ಕಾರಿ ಕಾರ್ಯಕ್ರಮಗಳ ಆಚರಣೆಯನ್ನು ಪಿಆರ್ ಕಂಪೆನಿಗಳಿಗೆ ವಹಿಸಿ ಒಂದಕ್ಕೆ ಐದು ಪಟ್ಟು ಬಿಲ್ ಏರಿಸಿ ವೆಚ್ಚ ಮಾಡಲಾಗುತ್ತಿದೆ.

ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ನೀಡಲು ಆಡಳಿತಾತ್ಮಕ ವೆಚ್ಚ ಎಂದು ನೆಪ ಹೇಳುತ್ತಾರೆ ಎಂದು ಕಾರ್ಯಕರ್ತರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಾರಿಯೂ ಶಾಸಕರಿಗೆ ಆದ್ಯತೆ ನೀಡುವುದಾಗಿ ಹೇಳಲಾಗುತ್ತಿದೆ. ಹಾಗಿದ್ದರೆ ಕಾರ್ಯಕರ್ತರು ಮಾತ್ರ ದುಡಿಯಲಿಕ್ಕೆ ಮಾತ್ರ ಇರುವುದಾ ಎಂದು ಇತ್ತೀಚೆಗೆ ರಹಸ್ಯೆ ಸಭೆ ನಡೆಸಿದ ಕೆಲ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಹೀಗೆ ಆದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಮುಗ್ಗರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಈ ಮೊದಲು ದೀಪಾವಳಿ ವೇಳೆಗೆ ನಿಗಮ ಮಂಡಳಿಗಳ ನೇಮಕಾತಿಯಾಗಲಿದೆ ಎಂದು ಹೇಳಲಾಗಿತ್ತು, ಅದು ಮುಂದೂಡಿಕೆಯಾಗಿದ್ದು ಹೊಸ ವರ್ಷಕ್ಕೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಪಂಚರಾಜ್ಯಗಳ ಚುನಾವಣಾ ಉಸ್ತುವಾರಿಯಲ್ಲಿದ್ದು ಅವು ಮುಗಿದ ಬಳಿಕ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಡಿಸೆಂಬರ್ 4 ರಿಂದ ಬೆಳಗಾವಿ ಅಧಿವೇಶನ ನಡೆಯಲಿದೆ. ಅದು ಮುಗಿದ ಬಳಿಕ ನಿಗಮ ಮಂಡಳಿಗಳ ನೇಮಕಾತಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಗಣೇಶ್ ಹಬ್ಬ, ದೀಪಾವಳಿ, ಹೊಸ ವರ್ಷ, ಸಂಕ್ರಾಂತಿ ಎಂದು ನಿರೀಕ್ಷಿಸುವುದೇ ನಮ್ಮ ಹಣೆಯ ಬರಹ ಎಂದು ಕಾರ್ಯಕರ್ತರು ಹಲಬುತ್ತಿದ್ದಾರೆ. ಸಂಕ್ರಾಂತಿ ಬಳಿ ಲೋಕಸಭೆ ಚುನಾವಣೆ ತಯಾರಿಗಳು ಎಂದು ನಾಯಕರು ಬ್ಯೂಸಿಯಾಗುತ್ತಾರೆ. ಅಲ್ಲಿಗೆ ಮತ್ತೆ ಒಂದು ವರ್ಷ ಕಾರ್ಯಕರ್ತರಿಗೆ ಅರ್ಧ ಚಂದ್ರ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

RELATED ARTICLES

Latest News