ತುಮಕೂರು, ಜೂ.6- ಕಂಟೈನರ್ ಲಾರಿಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸೆಕ್ಯೂರಿಟಿ ಗಾರ್ಡ್‌ಗಳು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48 ರ ನಂದಿಹಳ್ಳಿ ಬಳಿ ಇಂದು ಬೆಳಗ್ಗೆ ನಡೆದಿದೆ. ನಗರದ ಉಪ್ಪಾರಹಳ್ಳಿ ನಿವಾಸಿಗಳಾದ ರಾಜೇಶ್ (25) ಧನಂಜಯ್ (27) ಹಾಗೂ ಧನುಷ್ (23) ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.
ದಾಬಸ್‌ಪೇಟೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮೂವರು ರಾತ್ರಿ ಪಾಳಿ ಮುಗಿಸಿಕೊಂಡು ಬೆಳಗ್ಗೆ 7. 30 ರ ಸುಮಾರಿನಲ್ಲಿ ತುಮಕೂರಿಗೆ ಒಂದೆ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ನಂದಿಹಳ್ಳಿ ಬಳಿ ಪೆಟ್ರೋಲ್ ಹಾಕಿಸಿಕೊಂಡು ರಸ್ತೆಗೆ ತಿರುವು ಪಡೆಯುತ್ತಿದ್ದಾಗ ಕಂಟೈನರ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ನಿದ್ದೆ ಮಂಪರಿನಲ್ಲಿ ಬೈಕ್ ಓಡಿಸಿಕೊಂಡು ಬಂದಿದ್ದರಿಂದ ಲಾರಿ ಕಾಣದೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ.
ಸುದ್ದಿ ತಿಳಿದ ಕೂಡಲೇ ಎಎಸ್ಪಿ ಗೋಪಾಲ್, ಡಿವೈಎಸ್‌ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಠಾಣೆಯ ಸಿಪಿಐ ರಾಮ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.