Tuesday, June 17, 2025
Homeಅಂತಾರಾಷ್ಟ್ರೀಯ | Internationalಇಸ್ರೇಲ್‌ ದಾಳಿಗೆ ಇರಾನ್‌ನಲ್ಲಿ ಕನಿಷ್ಠ 406 ಜನ ಸಾ*ವು

ಇಸ್ರೇಲ್‌ ದಾಳಿಗೆ ಇರಾನ್‌ನಲ್ಲಿ ಕನಿಷ್ಠ 406 ಜನ ಸಾ*ವು

ದುಬೈ,ಜೂ.16- ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದಿದ್ದು ಇಸ್ರೇಲ್‌ ನಡೆಸಿದ ಕ್ಷಿಪಣಿಗಳ ದಾಳಿಗೆ ಇರಾನ್‌ನಲ್ಲಿ ಕನಿಷ್ಠ ಪಕ್ಷ 406 ಜನರು ಮೃತಪಟ್ಟು 654 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇರಾನ್‌ನ ಪರಮಾಣು ಯೋಜನೆಯ ತಾಣಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದ್ದು ಹಲವರು ಪರಮಾಣು ವಿಜ್ಞಾನಿಗಳು ಬಲಿಯಾಗಿದ್ದರು.
ಇರಾನ್‌ನ ರಾಜಧಾನಿ ತೆಹರಾನ್‌ನಲ್ಲಿ ನಿನ್ನೆ ಮಧ್ಯಾಹ್ನ 3.30ಕ್ಕೆ ಸ್ಫೋಟಗಳು ಸಂಭವಿಸಿ ಇಡೀ ನಗರವನ್ನು ನಡುಗಿಸಿದವು. ಇಸ್ರೇಲ್‌ನಲ್ಲಿ ಸಂಜೆ 4 ಗಂಟೆಗೆ ಮತ್ತು ರಾತ್ರಿ ಸುಮಾರು 8.30ಕ್ಕೆ ಯುದ್ಧ ಸೈರನ್‌ಗಳು ಮೊಳಗಿದವು. ಉತ್ತರ ಭಾಗದಲ್ಲಿ ಹೈಫಾ ಸೇರಿದಂತೆ ಹಲವಾರು ದಾಳಿಯ ಸ್ಥಳಗಳನ್ನು ಇಸ್ರೇಲ್‌ ಸೇನೆ ಗುರುತಿಸಿತು.

ಇಲ್ಲಿಯವರೆಗೆ ದೇಶದಲ್ಲಿ ಇರಾನ್‌ ದಾಳಿಗೆ 14 ಜನರು ಸತ್ತಿದ್ದು, 390 ಮಂದಿ ಗಾಯಗೊಂಡಿದ್ದಾರೆ. ಇರಾನ್‌ 270 ಕ್ಷಿಪಣಿಗಳನ್ನು ಉಡಾಯಿಸಿದ್ದು ಅವುಗಳಲ್ಲಿ 22 ದೇಶದ ಸೂಕ್ಷ್ಮ ಬಹು ಹಂತದ ವಾಯು ನೆಲೆಗಳನ್ನು ಗುರಿಯಾಗಿಸಿದ್ದವು ಎಂದು ಇಸ್ರೇಲ್‌ ಹೇಳಿದೆ. ಸತತ ಮೂರನೇ ದಿನವೂ ಇಸ್ರೇಲ್‌ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್‌ ಮಾಡಲಾಗಿದೆ. ಇರಾನ್‌ ಮೇಲೆ ಇಸ್ರೇಲ್‌ ದಾಳಿ ನಿಲ್ಲದಿದ್ದರೆ ನಮ ಪ್ರತಿಕ್ರಿಯೆಯೂ ನಿಲ್ಲುವುದಿಲ್ಲ ಎಂದು ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ಬಾಸ್‌‍ ಅರಾಘ್ಚಿ ಅವರು ಎಚ್ಚರಿಸಿದ್ದಾರೆ.

ಅಮೆರಿಕವು ಇಸ್ರೇಲ್‌ಗೆ ಬೆಂಬಲ ನೀಡುತ್ತಿರುವುದನ್ನು ಟೀಕಿಸಿರುವ ಇರಾನ್‌ನ ಅಧ್ಯಕ್ಷ ಮಸಾದ್‌ ಫೆಝೆಸ್ಕಿಯನ್‌ ಅವರು ಒಂದು ವೇಳೆ ಇರಾನ್‌ನ ಹಗೆತನದ ಕ್ರಮಗಳು ಮುಂದುವರಿದರೆ ನಮ ಪ್ರತಿಕ್ರಿಯೆಗಳು ಹೆಚ್ಚು ನಿರ್ಧಾರಕ ಮತ್ತು ತೀವ್ರವಾಗಲಿದೆ ಎಂದು ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ಟಿವಿ ವರದಿ ಮಾಡಿದೆ. ಈ ದಾಳಿ ಕುರಿತು ಅಮೆರಿಕ ಮಾಡುವಂಥಾದ್ದೇನಿಲ್ಲ. ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳುವ ಮೂಲಕ ಇರಾನ್‌ ಮತ್ತಷ್ಟು ವಿಧ್ವಂಸ ತಡೆಗಟ್ಟಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ.

ತೆಹರಾನ್‌ನ ಉತ್ತರಕ್ಕಿರುವ ವಿದೇಶಾಂಗ ಸಚಿವಾಲಯದ ಕಟ್ಟಡವೊಂದನ್ನು ಇಸ್ರೇಲ್‌ ಹೊಡೆದುರುಳಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ನನ್ನ ಸಹೋದ್ಯೋಗಿಗಳೂ ಗಾಯಾಳುಗಳಾಗಿದ್ದಾರೆ ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಸಯಿಂದ್‌ ಖತಿಬರ್‌ಜಡೇಹ್‌ ಅವರು ವಿವರಿಸಿದ್ದಾರೆ. ಇರಾನ್‌ನ ರಕ್ಷಣಾ ಸಚಿವಾಲಯವನ್ನೂ ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದೆ. ದಾಳಿ ನಡೆದ ಸ್ಥಳಗಳಲ್ಲಿ ರಕ್ತಸಿಕ್ತ ಜನರು ಓಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಮಸೀದಿಗಳಲ್ಲಿ ಆಶ್ರಯ ಪಡೆದರು.

ಇಂಧನ ಮರುಪೂರಣ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಮತ್ತು ಇದು ತಾನು ನಡೆಸಿದ ಅತ್ಯಂತ ದೂರದ ದಾಳಿ ಎಂಬುದಾಗಿ ಇಸ್ರೇಲ್‌ ಹೇಳಿಕೊಂಡಿದೆ. ನಗರದಾದ್ಯಂತ ಹೊಗೆಯ ಮೋಡ ಎದ್ದಿರುವ ವಿಡಿಯೋಗಳು ಬಿತ್ತರಗೊಂಡಿವೆ. ಇಸ್ರೇಲ್‌ನಲ್ಲಿ 10 ವರ್ಷ ಮತ್ತು 9 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಇರಾನ್‌ ದಾಳಿಗೆ ಬಲಿಯಾಗಿದ್ದಾರೆ. ಟೆಲ್‌ ಅವೀವ್‌ ಸಮೀಪದ ಬತ್‌ಯಾಮ್‌ನಲ್ಲಿನ ವಸತಿ ಕಟ್ಟಡವೊಂದರ ಮೇಲೆ ಇರಾನ್‌ ಕ್ಷಿಪಣಿ ಬಿದ್ದು ಸಾವು-ನೋವು ಉಂಟಾಯಿತು. ಸ್ಥಳೀಯ ಪೊಲೀಸ್‌‍ ಕಮಾಂಡರ್‌ ಡೇನಿಯಲ್‌ ಹದಾದ್‌ ಅವರು 180 ಜನರು ಗಾಯಗೊಂಡಿರುವುದಾಗಿ ತಿಳಿಸಿದರು.

ಉತ್ತರ ಇಸ್ರೇಲ್‌ನ ಅರಬ್‌ ಪಟ್ಟಣ ತಮ್ರಾದಲ್ಲಿ ಕಟ್ಟಡವೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 13 ವರ್ಷದ ಬಾಲಕ ಸೇರಿ ನಾಲ್ಕು ಮಂದಿ ಬಲಿಯಾಗಿ 24 ಜನರು ಗಾಯಗೊಂಡರು.
ಇಸ್ರೇಲ್‌ನ ನಗರ ಹೈಫಾದಲ್ಲಿನ ತೈಲ ಸಂಸ್ಕರಣಾಗಾರವೊಂದು ಹಾನಿಗೊಳಗಾಗಿದೆ. ಸಾವು-ನೋವು ಸಂಭವಿಸಿಲ್ಲ. ಈ ಸಂಘರ್ಷದ ಪರಿಣಾಮವಾಗಿ ಇರಾನ್‌ನಲ್ಲಿ ಆಡಳಿತ ಬದಲಾಗಬಹುದು ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

RELATED ARTICLES

Latest News