ಬೆಂಗಳೂರು, ನ.16- ರಸ್ತೆ ಬದಿ ನಿಲ್ಲಿಸಿದಂತಹ 15ಕ್ಕೂ ಹೆಚ್ಚು ಕಾರುಗಳು ಹಾಗೂ ಬೈಕ್‍ಗಳ ಗಾಜು ಒಡೆದು ಹಾನಿ ಮಾಡಿ ಪರಾರಿಯಾಗಿದ್ದ ಬೊಂಬೆ ಮಾಸ್ಕ್ ಗ್ಯಾಂಗ್‍ನ ಐದು ಮಂದಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ, ಲಾಂಗು, ಮುಖವಾಡಗಳು, ಎರಡು ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡಿ ಆ ಪ್ರದೇಶದಲ್ಲಿ ತಮ್ಮದೇ ಪಾರುಪತ್ಯ ಹೊಂದುವ ಸಲುವಾಗಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ಕಂಡು ಬಂದಿದೆ. ಮೊದಲನೇ ಆರೋಪಿ ಪೀಣ್ಯ, ಗಂಗಮ್ಮನ ಗುಡಿ, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗಳ ಹಗಲು ಮತ್ತು ರಾತ್ರಿ ಕನ್ನಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ.
ಬಿಜೆಪಿ-ಜೆಡಿಎಸ್ ನಾಯಕರ ಹತಾಶೆಯಿಂದ ಗೊಂದಲ ಸೃಷ್ಟಿ: ಡಿಕೆಶಿ
ಕಳೆದ ನ.10ರಂದು ಮುಂಜಾನೆ ಎಂಟತ್ತು ಮಂದಿಯ ಗುಂಪೊಂದು ಬೊಂಬೆ ಮಾಸ್ಕ್ ಹಾಕಿಕೊಂಡು ಲಗ್ಗೆರೆಯ ರಸ್ತೆ ಬದಿಗಳಲ್ಲಿ ನಿಲ್ಲಿಸಿದಂತಹ ಕಾರುಗಳು ಹಾಗೂ ಬೈಕ್‍ಗಳ ಗಾಜುಗಳನ್ನು ಒಡೆದು ಪುಂಡಾಟ ಮೆರೆದಿತ್ತು. ಬೆಳಗಾಗುತ್ತಿದ್ದಂತೆ ಕಾರು ಹಾಗೂ ಬೈಕ್‍ಗಳ ಮಾಲೀಕರು ನೋಡಿ ತಕ್ಷಣ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ರಸ್ತೆಗಳಲ್ಲಿದ್ದಂತಹ ಸಿಸಿ ಕ್ಯಾಮೆರಾ ಪರಿಶೀಲಿಸಿ ಅದರಲ್ಲಿದ್ದ ದೃಶ್ಯಾವಳಿಗಳನ್ನು ಆಧರಿಸಿ ಐದು ಮಂದಿ ಆರೋಪಿ ಗಳನ್ನು ಪತ್ತೆಹಚ್ಚಿ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.