ರಾಮನಗರ, ಜೂ.26– ಚುನಾವಣೆಗೆ ನಿಲ್ಲುವ ಸಮಯ ಬಂದರೆ ರಾಮನಗರದಲ್ಲಿಯೇ ನನ್ನ ಮುಂದಿನ ಚುನಾವಣೆ. ಯಾವುದೇ ಕಾರಣಕ್ಕೂ ನಾನು ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದು ದೃಢ ಸಂಕಲ್ಪವನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
ಇದು ನಮ್ಮ ಸ್ವ ಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನು ಪ್ರೀತಿಯಿಂದ ಹರಸಿದ್ದೀರಿ. ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ. ಸೋಲು-ಗೆಲುವು ಸರ್ವೇ ಸಾಮಾನ್ಯ. ನನ್ನ ಮೂರು ಸೋಲುಗಳು ನನಗೆ ರಾಜಕೀಯವಾಗಿ ಪರಿಪಕ್ವತೆಯನ್ನು ಕಲಿಸಿವೆ. ಈ ಸೋಲುಗಳಿಂದ ಕುಗ್ಗದೆ ಮತ್ತೆ ಅವಕಾಶ ಸಿಕ್ಕರೆ ರಾಮನಗರದಿಂದಲೇ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಆರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ದೆಹಲಿಯಲ್ಲಿ ಕೆಲಸವಿಲ್ಲ. ರಾಜ್ಯಕ್ಕೆ ಬರುತ್ತಾರೆಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾವು ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಡಿ.ಕೆ ಸುರೇಶ್ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕೊಡಿಸಿದ್ರಾ? ಎಂದು ಟಾಂಗ್ ನೀಡಿದ್ದಾರೆ.
ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕುಮಾರಣ್ಣ ನೆರವಿಗೆ ಬಂದಿದ್ದಾರೆ. ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದ ಕುಮಾರಣ್ಣ ಅವರ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ. ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಆಗಲ್ಲ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ರಾಮನಗರ ಹೆಸರನ್ನು ಕಾಂಗ್ರೆಸ್ ಅಳಿಸಿದೆ. ಆದರೆ ರಾಮನಗರ ಜನರ ಹೃದಯದಲ್ಲಿ ರಾಮನಗರ ಶಾಶ್ವತವಾಗಿ ಉಳಿದಿದೆ ಎಂದು ಅವರು ಹೇಳಿದ್ದಾರೆ.
ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರಾದ ಎ. ಮಂಜುನಾಥ್, ತಾಲ್ಲೂಕು ಅಧ್ಯಕ್ಷರಾದ ಸಬ್ಬಕೆರೆ ಶಿವಲಿಂಗಪ್ಪ, ನಗರಸಭಾ ಸದಸ್ಯ ಮಂಜುನಾಥ್, ಮಾಜಿ ನಗರಸಭೆ ಸದಸ್ಯ ರವಿ, ಮುಖಂಡರುಗಳಾದ ಪ್ರಕಾಶ್, ಎಸ್ ಸಿ ರಾಜಣ್ಣ, ಲಕ್ಷ್ಮೀ ಗೂಳಿಗೌಡ, ಹಾರೋಹಳ್ಳಿ ರಾಮಣ್ಣ, ಕೆಂಪಣ್ಣ, ವಾಸು, ದೊರೆ, ಉಮೇಶ್, ಬಿಡದಿ ಶೇಷಪ್ಪ, ವೆಂಕಟೇಶ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
- ಚೀನಾದಲ್ಲಿ ಪ್ರವಾಹಕ್ಕೆ ಆರು ಮಂದಿ ಬಲಿ
- ಸಂಸತ್ಗಿಂತ ಸಂವಿಧಾನವೇ ಸರ್ವೋಚ್ಚ : ಸಿಜೆಐ ಬಿ.ಆರ್. ಗವಾಯಿ
- 50 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಪೊಲೀಸರು
- ರಕ್ಷಣಾ ಸ್ವಾವಲಂಬನೆಗೆ ಒತ್ತು : ಪ್ರಧಾನಿ ಮೋದಿ
- ಅಧ್ಯಕ್ಷರು, ಸಚಿವರ ಬದಲಾವಣೆ : ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಗರಿಗೆದರಿದ ಚರ್ಚೆ