ಬೆಂಗಳೂರು, ನ.19- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ -ಮಗು ಮೃತಪಟ್ಟಿರುವ ಭೀಕರ ಘಟನೆ ಇಂದು ಮುಂಜಾನೆ ವೈಟ್‍ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ನಡೆದಿದೆ. ಕಾಡುಗೋಡಿಯ ಎ.ಕೆ.ಗೋಪಾಲ್ ಕಾಲೋನಿ ನಿವಾಸಿ ಸೌಂದರ್ಯ(23), 9 ತಿಂಗಳ ಮಗು ಸುವಿಕ್ಸಲಿಯ ಮೃತಪಟ್ಟ ದುರ್ದೈವಿಗಳು.
ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಮನಕಲಕುವ ಘಟನೆಯೊಂದು ನಡೆದಿದ್ದು ಎರಡು ಅಮಾಯಕ ಜೀವಗಳು ಕುಟುಂಬ ಸದಸ್ಯರ ಸಮುಖದಲ್ಲೇ ಬಲಿಯಾಗಿವೆ .ಮೃತ ಸೌಂದರ್ಯ ತಮ್ಮ ಕುಟುಂಬದ ಜೊತೆ ತಮಿಳುನಾಡಿಗೆ ಹೋಗಿ ಇಂದು ಮುಂಜಾನೆ 5 ಗಂಟೆಗೆ ಬೆಂಗಳೂರಿಗೆ ಬಂದು ಬಸ್ ಇಳಿದು ತಾಯಿ ಮನೆಗೆ ನಡೆದು ಹೋಗುತ್ತಿದ್ದಾಗ ರಸ್ತೆ ಬದಿ ತುಂಡಾಗಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ತುಳಿದಿದ್ದಾರೆ.
ಆಲ್ ದಿ ಬೆಸ್ಟ್ ಟೀಂ ಇಂಡಿಯಾ: ಶುಭಕೋರಿದ ಪ್ರಧಾನಿ ಮೋದಿ
ಈ ವೇಳೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ತಾಯಿ- ಮಗಳು ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿದು ಕಾಡುಗೋಡಿ ಪೊಲೀಸರು ಹಾಗು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಸ್ಕಾಂಗೆ ಕರೆ ಮಾಡಿ ಒಂದು ಗಂಟೆಯಾದ್ರೂ ಸ್ಥಳಕ್ಕೆ ಯಾರೂ ಬಂದಿಲ್ಲ. ಸೂಕ್ತ ಸಮಯಕ್ಕೆ ಸ್ಥಳೀಯ ನಿವಾಸಿಗಳೂ ಸಹಾಯಕ್ಕೆ ಬಂದಿಲ್ಲ.
ವಿದ್ಯುತ್ ತಂತಿ ತುಳಿದ ತಕ್ಷಣ ಬೆಂಕಿ ಹತ್ತಿಕೊಂಡಿದ್ದು ತಾಯಿ -ಮಗು ದಹನಗೊಂಡಿದ್ದಾರೆ. ಸೌಂದರ್ಯ ಪತಿ ಸಂತೋಷ್ ಕೂಡ ಸ್ಥಳಕ್ಕೆ ಬಂದು ಈ ದೃಶ್ಯ ಕಂಡು ರೋದಿಸಿದ್ದಾರೆ. ಕಣ್ಣ ಮುಂದೆ ಹೆಂಡತಿ, ಮಗು ಪ್ರಾಣಬಿಟ್ಟರೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದರು.
ಈ ದೃಶ್ಯವನ್ನು ಕಂಡು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಾಡುಗೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಸ್ಕಾಂ ಎಇ ಚೇತನ್, ಜೆಇ ರಾಜಣ್ಣ, ಬೆಸ್ಕಾಂ ಸ್ಟೇಷನ್ ಆಪರೇಟರ್ ಮಂಜು ಸೇರಿ ಮೂವರು ಬೆಸ್ಕಾಂ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.