ಮಧುಗಿರಿ,ಆ.4- ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದ ಕೆರೆಯ ಕೋಡಿ ನೀರು ಹರಿಯುವ ಹಳ್ಳದ ಪಕ್ಕದ ಜಮೀನಿನಲ್ಲಿ 19 ನವಿಲುಗಳು ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಜಮೀನು ಒಂದರಲ್ಲಿ ಈ ದುರ್ಘಟನೆ ನಡೆದಿದ್ದು, ಜಮೀನಿಗೆ ತೆರಳಿದ್ದ ಮಾಲೀಕರು ಜಮೀನಿನಲ್ಲಿ ಸತ್ತು ಬಿದ್ದಿದ್ದ ನವಿಲುಗಳನ್ನು ಕಂಡು ಸ್ಥಳೀಯ ಪೊಲೀಸರಿಗೂ ಹಾಗೂ ವಲಯದ ಅರಣ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ತಾಲ್ಲೂಕು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದ ಅಧಿಕಾರಿಗಳು 5 ಗಂಡು ಹಾಗೂ 14 ಹೆಣ್ಣು ನವಿಲುಗಳು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ನವಿಲುಗಳ ಸಾವಿಗೆ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಅರಣ್ಯಾಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಸತ್ತ ನವಿಲುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವಿಧಿವಿಜ್ಞಾನ ಕೇಂದ್ರದಿಂದ ವರದಿ ಬಂದ ನಂತರವಷ್ಟೇ 19 ನವಿಲುಗಳ ಸಾವಿಗೆ ಕಾರಣ ಏನೆಂಬುದು ಗೊತ್ತಾಗಲಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಎಸಿಎ್ ಮಲ್ಲಿಕಾರ್ಜುನ್, ವಲಯ ಅರಣ್ಯಾಧಿಕಾರಿ ಸುರೇಶ್, ಬೀಟ್ ಗಾರ್ಡ್ ಮಹೇಶ್ ಕುಮಾರ್, ಉಪ ಅರಣ್ಯ ವಲಯಾಧಿಕಾರಿ ಮುತ್ತುರಾಜು ಭೇಟಿ ನೀಡಿದ್ದರು.