Friday, November 22, 2024
Homeರಾಜ್ಯಲೋಕಸಭಾ ಟಿಕೆಟ್‍ಗೆ ಬಿಜೆಪಿ ನಾಯಕರ ಪೈಪೋಟಿ

ಲೋಕಸಭಾ ಟಿಕೆಟ್‍ಗೆ ಬಿಜೆಪಿ ನಾಯಕರ ಪೈಪೋಟಿ

ಬೆಂಗಳೂರು, ನ.22- ವಿಧಾನಸಭೆ ಚುನಾವಣೆ ಯಲ್ಲಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಕಣ್ಣು ಈಗ ಲೋಕಸಭೆ ಚುನಾವಣೆ ಮೇಲೆ ನೆಟ್ಟಿದೆ. ತೀವ್ರ ಪೈಪೋಟಿಯಿಂದ ಕೂಡಿರುವ ಸಂಸತ್ತಿನ ಚುನಾವಣೆಯ ಟಿಕೆಟ್ ಪಡೆಯಲು ಭಗೀರಥ ಪ್ರಯತ್ನ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿ ಹಲವಾರು ಪರಾಜಿತ ಅಭ್ಯರ್ಥಿಗಳು ಸಂಸತ್ತಿನ ಚುನಾವಣೆ ಪ್ರಚಾರವನ್ನೂ ಸಹ ತೆರೆಮರೆಯಲ್ಲಿ ನಡೆಸಿದ್ದಾರೆ.

ಬಿಜೆಪಿಯಲ್ಲಿ ಹತ್ತಕ್ಕೂ ಹೆಚ್ಚು ಜನ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರು, ಮಾಜಿ ಶಾಸಕರು ಲೋಕಸಭೆ ಚುನಾವಣೆ ಟಿಕೆಟ್ ಗಿಟ್ಟಿಸಿಕೊಳ್ಳಲು ಈಗಿನಿಂದಲೇ ಲಾಬಿ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಈ ಬಾರಿಯೂ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ.

ಪ್ರಧಾನಿ ಮೋದಿ ಅವರ ಜನಪ್ರಿಯ ಅಲೆಯಲ್ಲಿ ಲೋಕಸಭೆ ಚುನಾವಣೆ ಗೆಲವು ಕಷ್ಟವಾಗಲಾರದು ಎನ್ನುವ ಅಭಿಪ್ರಾಯದಿಂದ ಹೆಚ್ಚಿನ ಮುಖಂಡರು ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮಗೆ ಟಿಕೆಟ್ ನೀಡಬೇಕೆಂದು ಮಾಜಿ ಸಚಿವರು ಮತ್ತು ಮಾಜಿ ಶಾಸಕರುಗಳು ರಾಜ್ಯ ಬಿಜೆಪಿ ನಾಯಕರು ಮತ್ತು ದೆಹಲಿ ನಾಯಕರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ತಮಗೆ ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸವನ್ನು ಸಹ ಅವರುಗಳು ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿ ಸೋತಿರುವ ಮಾಜಿ ಸಚಿವರಾದ ಸಿ ಟಿ ರವಿ, ಬಿ.ಸಿ.ಪಾಟೀಲ , ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಡಾ.ಡಿ.ಸುಧಾಕರ್, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಮಾಜಿ ಸಾರಿಗೆ ಸಚಿವ ಶ್ರೀರಾಮುಲು, ಕರುಣಾಕರ ರೆಡ್ಡಿ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಹಲವಾರು ಮುಖಂಡರುಗಳು ಲೋಕಸಭೆ ಚುನಾವಣೆ ಸ್ಪರ್ಧೆಗಾಗಿ ಬಿಜೆಪಿಯ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಎನ್‌ಸಿಇಆರ್‌ಟಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರ್ಪಡೆಗೆ ಶಿಫಾರಸು

ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಹಲವಾರು ಲೋಕಸಭೆ ಸದಸ್ಯರುಗಳು ಬರಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರಾಸಕ್ತಿ ತೋರಿರುವುದು ಹಾಗೂ ವಯೋಮಾನದ ಕಾರಣದಿಂದ ಹಾಲಿ ಸಂಸದರುಗಳಿಗೆ ಟಿಕೆಟ್ ನೀಡದೆ ಇರುವ ಬಗ್ಗೆ ಪಕ್ಷದ ಹೈಕಮಾಂಡ್ ಯೋಚಿಸುತ್ತಿರುವುದು ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಕಸರತ್ತು ನಡೆಸುವುದಕ್ಕೆ ಪ್ರಬಲವಾದ ಅಸ್ತ್ರ ದೊರೆತಂತಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾಜಿ ಸಚಿವ ಸಿ.ಟಿ.ರವಿ ಉಡುಪಿ – ಚಿಕ್ಕಮಗಳೂರು ಇಲ್ಲವೇ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಆರೋಗ್ಯ ಸಚಿವ ಡಾ.ಡಿ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಈ ಕ್ಷೇತ್ರದಲ್ಲಿ ಸಂಸದರಾಗಿರುವ ಬಿ.ಎನ್.ಬಚ್ಚೇಗೌಡರಿಗೆ ವಯಸ್ಸಿನ ಕಾರಣದಿಂದಾಗಿ ಟಿಕೆಟ್ ದೊರೆಯುವುದು ಅನುಮಾನ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳೆರಡರಲ್ಲಿ ಸ್ಪರ್ಧೆ ಮಾಡಿ ಸೋತಿರುವ ಮಾಜಿ ಸಚಿವ ವಿ.ಸೋಮಣ್ಣನವರು ಬೆಂಗಳೂರು ದಕ್ಷಿಣ ಅಥವಾ ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೊನ್ನಾಳಿ ಕ್ಷೇತ್ರದಲ್ಲಿ ಸೋತಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹೆಚ್ಚಿನ ಆಸಕ್ತಿ ತೋರದಿರುವ ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರ ಕ್ಷೇತ್ರದಲ್ಲಿ ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪರ್ಧೆ ಮಾಡಲು ಉತ್ಸುಕರಾಗಿದ್ದಾರೆ. ಮಾಜಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿಯವರು ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.

ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಕರುಣಾಕರ ರೆಡ್ಡಿಯವರು ಬಳ್ಳಾರಿ ಕ್ಷೇತ್ರದಿಂದ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿಜಯಪುರ ಕ್ಷೇತ್ರದಿಂದ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉತ್ತರ ಕನ್ನಡ ಕ್ಷೇತ್ರದಿಂದ ಸಂಸತ್ ಚುನಾವಣೆಗೆ ಸ್ಪರ್ಧೆ ಮಾಡಲು ಒಲವನ್ನು ವ್ಯಕ್ತ ಪಡಿಸಿದ್ದಾರೆಂದು ಹೇಳಲಾಗಿದೆ.

ಹಾಲಿ ಸಂಸದರಿಗೆ ಕೊಕ್ : ಇದರ ಬೆನ್ನಲ್ಲೇ ಬಿಜೆಪಿಯ ಹಲವಾರು ಹಿರಿಯ ಲೋಕಸಭಾ ಸದಸ್ಯರಿಗೆ ತಳಮಳ ಹೆಚ್ಚಾಗಿದೆ. ಈ ಬಾರಿ ಅಂದಾಜು 10 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ದಾವಣಗೆರೆ ಸಂಸದ ಜಿ.ಸಿದ್ದೇಶ್ವರ ಹಾಗೂ ಹಾವೇರಿ – ಗದಗ ಸಂಸದ ಎಂ.ಪಿ. ಶಿವಕುಮಾರ್ ಉದಾಸಿ ಅವರು ಮುಂದಿನ ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಅವರೂ ಸೇರಿದಂತೆ ಅಂದಾಜು 9 ಹಾಲಿ ಸಂಸದರಿಗೆ ಟಿಕೆಟ್ ಎಂದು ಮೂಲಗಳು ಹೇಳುತ್ತಿವೆ.

ತುಮಕೂರು ಸಂಸದ ಜಿ.ಎಸ್. ಬಸವರಾಜು (82), ದಾವಣಗೆರೆ ಸಂಸದ ಜಿ. ಸಿದ್ದೇಶ್ವರ (71), ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗ್ಡೆ (55), ಹಾವೇರಿ – ಗದಗ ಸಂಸದ ಶಿವಕುಮಾರ್ ಉದಾಸಿ (56), ಬಳ್ಳಾರಿಯ ಸಂಸದ ವೈ. ದೇವೇಂದ್ರಪ್ಪ (72), ಕೊಪ್ಪಳ ಸಂಸದ ಸಂಗಣ್ಣ ಕರಡಿ (73), ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ (66), ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ (71), ಬಾಗಲಕೋಟೆ ಸಂಸದ ಪಿ.ಸಿ. ಗಡ್ಡಿಗೌಡರ್ (72), ಬೆಳಗಾವಿ ಸಂಸದ ಮಂಗಳಾ ಅಂಗಡಿ (60) ಅವರಿಗೆ ಟಿಕೆಟ್ ಸಿಕ್ಕುವುದು ಅನುಮಾನ ಎನ್ನಲಾಗಿದೆ.

ಪಾಕ್ ಉಗ್ರ ನಂಟು: ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

ಇವರಲ್ಲಿ ದಾವಣಗೆರೆ ಸಂಸದರಾದ ಜಿ. ಸಿದ್ದೇಶ್ವರ ಅವರು ತಮ್ಮ ಪುತ್ರ ಜಿ.ಎಸ್. ಅನಿತ್ ಕುಮಾರ್ ಅವರಿಗೆ ಮುಂದಿನ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಬೇಕೆಂದು ಪಕ್ಷದ ಹೈಕಮಾಂಡ್‍ಗೆ ಈಗಗಾಲೇ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಅತ್ತ, ಕರಡಿ ಸಂಗಣ್ಣ ಸಹ ತಮ್ಮ ಪುತ್ರ ಅಮರೇಶ್ ಕರಡಿಯವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕೆಲವು ಮೂಲಗಳ ಪ್ರಕಾರ, 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ಪಕ್ಷವು ಆಂತರಿಕ ಸರ್ವೆ ಕಾರ್ಯ ಆರಂಭಿಸಿದೆ. ವಯೋಮಾನ ಹಾಗೂ ಸರ್ವೆ ವರದಿಯ ಅನುಸಾರವಾಗಿ ಹೇಳುವುದಾದರೆ ಅಂದಾಜು 8ರಿಂದ 10 ಸಂಸದರಿಗೆ ಈ ಬಾರಿ ಟಿಕೆಟ್ ಇಲ್ಲ. ಪಕ್ಷದಲ್ಲಿ 2ನೇ ದರ್ಜೆಯ ನಾಯಕರನ್ನು ಬೆಳೆಸುವ ಸಲುವಾಗಿಯೂ ಅವರು ಹೀಗೆ ಮಾಡಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News