ಬೆಂಗಳೂರು, ನ.22- ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿ ಸಲ್ಲಿಸುವವರೆಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಮುಂದುವರೆಯುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್‍ನಲ್ಲಿ ಆಯೋಗದ ವರದಿ ನೀಡಲಿದ್ದು, ಅಲ್ಲಿಯವರೆಗೂ ಮುಂದುವರೆಸಲಾಗುವುದು ಎಂದರು. ಜಯಪ್ರಕಾಶ್ ಹೆಗ್ಡೆಯವರು ತಮ್ಮನ್ನು ಭೇಟಿಯಾಗಿ ನಮ್ಮ ಅವಧಿ ಮುಗಿಯುವುದರೊಳಗೆ ವರದಿ ನೀಡಲಾಗುವುದು. ಒಂದು ವೇಳೆ ವರದಿ ನೀಡುವುದು ಒಂದು ತಿಂಗಳು ಹೆಚ್ಚು ಕಡಿಮೆಯಾದರೂ ಅಲ್ಲಿಯವರೆಗೂ ಮುಂದುವರೆಸಲು ಕೋರಿದ್ದರು. ಹೀಗಾಗಿ ಅವರ ವರದಿ ನೀಡುವವರೆಗೂ ಆಯೋಗದ ಅಧ್ಯಕ್ಷರಾಗಿ ಹೆಗ್ಡೆ ಮುಂದುವರೆಯುತ್ತಾರೆ ಎಂದು ಹೇಳಿದರು.
ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವರದಿ ಸ್ವೀಕರಿಸಬಾರದು ಎಂದು ನೀಡಿರುವ ಮನವಿಯನ್ನು ಸ್ವೀಕರಿಸಲಾಗಿದೆ. ಸಮೀಕ್ಷೆಯ ಮೂಲ ಪ್ರತಿ ಹಾಳಾಗಿದೆ ಎಂದು ಹೇಳಲು ನಾನೇನು ಆಯೋಗದ ಕಾರ್ಯದರ್ಶಿಯೇ ಎಂದು ಪ್ರಶ್ನಿಸಿದರು.
ಜಾತಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂಬುದು ಸಮುದಾಯದ ಅಭಿಪ್ರಾಯ:
ಸಮೀಕ್ಷೆಯ ಮೂಲ ಪ್ರತಿ ಹಾಳಾಗಿದೆ ಎಂದು ಯಾರು ಹೇಳಿದ್ದಾರೆಯೋ ಅವರನ್ನೇ ಕೇಳಿ. ನನಗೆ ಗೊತ್ತಿಲ್ಲ. ವರದಿ ಸಲ್ಲಿಕೆಗೂ ಮುನ್ನ ಅದರಲ್ಲಿ ಏನಿದೆ ಎಂಬುದನ್ನು ಹೇಗೆ ಹೇಳಲು ಸಾಧ್ಯ ? ವರದಿ ಸಲ್ಲಿಕೆಯಾಗುವವೆರೆಗೂ ಕಾಯಬೇಕು. ರಾಜ್ಯ ಸರ್ಕಾರ 160 ಕೋಟಿ ರೂ. ಗೂ ಹೆಚ್ಚು
ಖರ್ಚು ಮಾಡಿ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.