Friday, August 22, 2025
Homeರಾಜ್ಯತೆರಿಗೆ ವಂಚನೆ, ಗೇಮಿಂಗ್‌ ಆ್ಯಪ್‌ಗಳ ಮೂಲಕ ಅಕ್ರಮ ಆಸ್ತಿ ಆರೋಪ : ಕಾಂಗ್ರೆಸ್‌ ಶಾಸಕ ವೀರೇಂದ್ರ...

ತೆರಿಗೆ ವಂಚನೆ, ಗೇಮಿಂಗ್‌ ಆ್ಯಪ್‌ಗಳ ಮೂಲಕ ಅಕ್ರಮ ಆಸ್ತಿ ಆರೋಪ : ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಇ.ಡಿ.ವಶಕ್ಕೆ

ED raids Karnataka MLA KC Veerendra Pappy in online gaming case

ಬೆಂಗಳೂರು,ಆ.22- ತೆರಿಗೆ ವಂಚನೆ ಹಾಗೂ ಗೇಮಿಂಗ್‌ ಆ್ಯಪ್‌ಗಳ ಮೂಲಕ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಕಾಂಗ್ರೆಸ್‌‍ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸಿಕ್ಕಿಂ ಪ್ರವಾಸದಲ್ಲಿದ್ದ ವೀರೇಂದ್ರ ಪಪ್ಪಿ ಅವರನ್ನು ಕೋಲ್ಕತ್ತಾದ ಇ.ಡಿ. ತಂಡ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಯಾವುದೇ ವೇಳೆ ಅವರನ್ನು ಬಂಧಿಸುವ ಸಾಧ್ಯತೆಯಿದೆ.
ಬೆಳಿಗ್ಗೆ ಇ.ಡಿ ಅಧಿಕಾರಿಗಳು ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ, ಗೋವಾ ಸೇರಿದಂತೆ ಮತ್ತಿತರೆಡೆ ದಾಳಿ ನಡೆಸಿ ಭಾರೀ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಅಲ್ಲದೆ ಅವರ ಮನೆಯಲ್ಲಿ ಒಂದು ಕೆಜಿಗೂ ಹೆಚ್ಚು ಚಿನ್ನ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ 2023 ರ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕಾಂಗ್ರೆಸ್‌‍ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಅವರ ನಿವಾಸದ ಮೇಲೂ ಇ.ಡಿ ದಾಳಿ ನಡೆಸಿದೆ.

ಮತ್ತೊಂದೆಡೆ ಗೋವಾ ರಾಜಧಾನಿ ಪಣಜಿಯಲ್ಲಿ ಮೆಜೆಸ್ಟಿಕ್‌ ಪ್ರೈಡ್‌ ಎಂಬ ಕ್ಯಾಸಿನೋ ನಡೆಸುತ್ತಿರುವ ಹವಾಲ ಹಗರಣದ ಕಿಂಗ್‌ಪಿನ್‌ ಸುಮಂದರ್‌ ಸಿಂಗ್‌ ಅವರ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಕಾಮಾಕ್ಷಿ ಅಪಾರ್ಟ್‌ಮೆಂಟ್‌ ಮೇಲೂ ದಾಳಿ ನಡೆಸಲಾಗಿದೆ. ಕರ್ನಾಟಕ, ಗೋವಾ, ಸಿಕ್ಕಿಂ ಸೇರಿದಂತೆ ಒಟ್ಟು 17ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಪ್ರಕರಣ ಸಂಬಂಧ ಮಹತ್ವದ ದಾಖಲೆಗಳು, ಕಾಗದಪತ್ರ, ಬ್ಯಾಂಕ್‌ ದಾಖಲೆಗಳು, ಚರ-ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

ಕಾನೂನು ಬಾಹಿರವಾಗಿ ವಹಿವಾಟು ಮತ್ತು ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡಿದ ಹಿನ್ನೆಲೆಯಲ್ಲಿ ವೀರೇಂದ್ರ ಪಪ್ಪಿಯನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗುತ್ತಿದೆ.
ಮೂಲಗಳ ಪ್ರಕಾರ, ಶಾಂತಿನಗರದಲ್ಲಿರುವ ಇ.ಡಿ ಕಚೇರಿಯಲ್ಲಿ ಅವರನ್ನು ವಿಚಾರಣೆ ನಡೆಸಿ ನಂತರ ಹೆಚ್ಚಿನ ಮಾಹಿತಿ ಪಡೆಯಲು ಬಂಧಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇ.ಡಿ ದಾಳಿ :
ತೆರಿಗೆ ವಂಚನೆ ಹಾಗೂ ಗೇಮಿಂಗ್‌ ಆ್ಯಪ್‌ಗಳ ಸಂಬಂಧ ದೂರು ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಹಾಗೂ ಸಹೋದರರ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಸಿಐಆರ್‌ ದಾಖಲಿಸಿ ಕರ್ನಾಟಕ ಹಾಗೂ ಗೋವಾದ ಹಲವೆಡೆ ದಾಳಿ ಮಾಡಲಾಗಿದೆ. ಕೆ.ಸಿ.ವೀರೇಂದ್ರ ಒಡೆತನದ ಕಂಪನಿಗಳಿಂದ ಗೇಮಿಂಗ್‌ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿತ್ತು. ವೀರೇಂದ್ರಗೆ ಸೇರಿದ ರತ್ನ ಗೋಲ್‌್ಡ, ರತ್ನ ಮಲ್ಟಿ ಸೋರ್ಸ್‌, ಪಪ್ಪಿ ಟೆಕ್ನಾಲಜಿ, ರತ್ನ ಗೇಮಿಂಗ್‌ ಸಲ್ಯೂಷನ್‌್ಸ ಸೇರಿ ಇತರ ಕಂಪನಿಗಳಿಂದ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ, ಬೆಂಗಳೂರು, ಗೋವಾ ಸೇರಿ 17 ಕಡೆ ದಾಳಿ ನಡೆದಿದೆ.

ಚಿತ್ರದುರ್ಗ ನಗರದ ಹಳೇ ಟೌನ್‌ ವೀರಭದ್ರ ಸ್ವಾಮಿ ದೇವಸ್ಥಾನ ಬಳಿ ಇರುವ ನಿವಾಸ, ಚಳ್ಳಕೆರೆ ಪಟ್ಟಣದಲ್ಲಿರುವ 4 ಮನೆ, ಬೆಂಗಳೂರಿನ ಸಹಕಾರ ನಗರದಲ್ಲಿರುವ ನಿವಾಸ ಹಾಗೂ ಗೋವಾದಲ್ಲೂ ಇಡಿ ದಾಳಿ ನಡೆಸಿದೆ.

ಕೆ.ಸಿ.ವೀರೇಂದ್ರ, ಕೆ.ಸಿ.ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಖಾಸಗಿ ಕಾರಿನಲ್ಲಿ ಬಂದ ಇಡಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.

ಭದ್ರತಾ ಪಡೆಯೊಂದಿಗೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 20ಕ್ಕೂ ಹೆಚ್ಚು ವಾಹನದಲ್ಲಿ ಬಂದಿರುವ 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ 2016ರ ಡಿಸೆಂಬರ್‌ 11 ರಂದು ಕೆಸಿ ವೀರೇಂದ್ರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ವೀರೇಂದ್ರ ಮನೆಯ ಬಾತ್‌ ರೂಂನಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ಹಣ, 30 ಕೆಜಿಗೂ ಹೆಚ್ಚು ಚಿನ್ನ ಪತ್ತೆ ಆಗಿತ್ತು.ಇನ್ನು ಗೋವಾದಲ್ಲೂ ಅವರ ಕಚೇರಿ ಮೇಲೂ ದಾಳಿ ನಡೆಸಿರುವ ಇ.ಡಿ. ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಸುಮ ಮೇಲೂ ಇ.ಡಿ ದಾಳಿ:
ವೀರೇಂದ್ರ ಪಪ್ಪಿ ಜೊತೆ ಆರ್ಥಿಕ ವಹಿವಾಟು ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಕುಸುಮ ಹನುಮಂತರಾಯಪ್ಪ ಅವರ ನಿವಾಸಗಳ ಮೇಲೂ ಇ.ಡಿ ದಾಳಿ ನಡೆಸಿದೆ.
ಬೆಳಿಗ್ಗೆ ಮುಂಜಾನೆ 4,30ಕ್ಕೆ ಅನ್ನಪೂರ್ಣೇಶ್ವರಿ ನಗರದ ಮುದ್ದನಪಾಳ್ಯದ ನಿವಾಸ ಹಾಗೂ ಚಂದ್ರಾ ಲೇ ಔಟ್‌ನಲ್ಲಿರುವ ಕಚೇರಿ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಶಾಸಕ ವೀರೇಂದ್ರ ಪಪ್ಪಿ ಜೊತೆ ಹನುಮಂತರಾಯಪ್ಪ ಪುತ್ರ ವ್ಯಾಪಾರ ವಹಿವಾಟು ನಡೆಸಿದ್ದಾರೆಂಬ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. 2 ಇನ್ನೋವಾ ಕಾರಿನಲ್ಲಿ ಬಂದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಭದ್ರತಾ ಅಧಿಕಾರಿಗಳನ್ನು ಕರೆತಂದಿದ್ದರು.

ಕಿಂಗ್‌ಪಿನ್‌ ಮೇಲೆ ದಾಳಿ :
ಹವಾಲಾ ಕಿಂಗ್‌ಪಿನ್‌ ಎಂದೇ ಗುರುತಿಸಿಕೊಂಡಿದ್ದ ಸುಮಂದರ್‌ ಸಿಂಗ್‌ ಅವರ ಮೇಲೂ ಇ.ಡಿ. ದಾಳಿ ನಡೆಸಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

2 ವಾಹನದಲ್ಲಿ ಭದ್ರತಾ ಪಡೆಗಳೊಂದಿಗೆ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದಾಗ ಮನೆಯೊಳಗಡೆ ಇದ್ದ ಸುಮಂದರ್‌ ಸಿಂಗ್‌ ಬಾಗಿಲು ತೆರೆಯಲು ನಿರಾಕರಿಸಿದರು. ಹಲವು ಬಾರಿ ಬಾಗಿಲು ಬಡಿದರೂ ತೆರೆಯದಿದ್ದಾಗ ಅನಿವಾರ್ಯವಾಗಿ ಬಾಗಿಲು ಮುರಿದು ಒಳಪ್ರವೇಶ ಮಾಡಿದರೆಂದು ತಿಳಿದುಬಂದಿದೆ.ಪಣಜಿಯಲ್ಲಿ ಮೆಜೆಸ್ಟಿಕ್‌ ಪ್ರೈಡ್‌ ಕೆಸಿನೋ ನಡೆಸುತ್ತಿರುವ ಸುಮಂದರ್‌ ಸಿಂಗ್‌ ತೆರಿಗೆ ವಂಚನೆ ಮಾಡಿದ್ದರೆಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

RELATED ARTICLES

Latest News