ಬೆಂಗಳೂರು,ನ.23-ತಮಿಳುನಾಡಿಗೆ ಪ್ರತಿದಿನ 2700 ಕ್ಯೂಸೆಕ್ಸ್‍ನಂತೆ ಒಂದು ತಿಂಗಳು ಕಾವೇರಿ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದೆ. ನ.23ರಿಂದ ಡಿ.23ರವರೆಗೂ ಒಂದು ತಿಂಗಳ ಕಾಲ ನೀರು ಹರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಮಳೆ ಕೊರತೆ ಇದೆ. ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಹಲವು ಬಾರಿ ಮನವಿ ಮಾಡಿದರೂ ಅದನ್ನು ಪರಿಗಣಿಸಿಲ್ಲ. ಸುಪ್ರೀಂಕೋರ್ಟ್‍ನ ಆದೇಶದ ಪ್ರಕಾರ ನೀರು ಹರಿಸುವಂತೆ ತಾಕೀತು ಮಾಡಲಾಗಿದೆ. ಕಾವೇರಿ ನದಿಕೊಳ್ಳದಲ್ಲಿ ಮಳೆಯಾಗುತ್ತಿದೆ. ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನೀರು ಹರಿಸಬೇಕು ಎಂದು ತಮಿಳುನಾಡು ವಾದ ಮಂಡಿಸಿದೆ.
ಕಾವೇರಿ ನದಿಪಾತ್ರದಿಂದ ಯಾಂತ್ರಿತವಾಗಿ ಮೂರು ಸಾವಿರ ಕ್ಯೂಸೆಕ್ ನೀರು ಹರಿದು ಹೋಗುತ್ತದೆ. ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ವಾದವನ್ನು ಪರಿಗಣಿಸಿ ನೀರಿನ ಹರಿವಿನ ಪ್ರಮಾಣವನ್ನು 2700 ಕ್ಯೂಸೆಕ್ಸ್‍ಗೆ ಮಿತಿಗೊಳಿಸಲಾಗಿದೆ ಎಂಬ ಅಭಿಪ್ರಾಯಗಳಿವೆ.
ಅಂತಿಮ ಹಂತ ತಲುಪಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ
ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಇದೆ ಎಂಬ ಕಾರಣಕ್ಕಾಗಿ ತಮಿಳುನಾಡಿಗೆ ನೀರು ಬಿಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಬೆಂಗಳೂರಿನ ಕುಡಿಯುವ ನೀರಿಗೆ ಸುಪ್ರೀಂಕೋರ್ಟ್ ಹಂಚಿಕೆ ಮಾಡಿದ ಪ್ರಕಾರ ನೀರಿನ ಪ್ರಮಾಣವನ್ನು 18 ಟಿಎಂಸಿಯಿಂದ 24 ಟಿಎಂಸಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಅಸೂಚನೆ ಹೊರಡಿಸಿದೆ.
ಒಂದಷ್ಟು ದಿನ ಮಳೆಯಾದ ಕಾರಣಕ್ಕೆ ನೀರಿನ ಒಳಹರಿವು ಸುಧಾರಿಸತ್ತಾದರೂ ಮತ್ತೆ ತಗ್ಗಿದೆ. ಇದರ ನಡುವೆ ಪದೇ ಪದೇ ನೀರು ಬಿಡುವಂತೆ ನಿಯಂತ್ರಣ ಸಮಿತಿ ಆದೇಶಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನಿಯಂತ್ರಣ ಸಮಿತಿಯ ತೀರ್ಪನ್ನು ನೀರು ನಿರ್ವಹಣಾ ಪ್ರಾಕಾರದ ಮುಂದೆ ಪ್ರಶ್ನಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.