ಬೆಂಗಳೂರು, ಫೆ.17- ಕಟ್ಟಾ ಕಾಂಗ್ರೆಸ್ಸಿಗರು, ಯಾರೂ ಕೂಡ ಬೀದಿನಾಯಿಗಳಲ್ಲ. ನಿಯತ್ತಿನ ನಾಯಿಗಳೇ ಹೊರತು ಬೀದಿ ನಾಯಿಗಳಲ್ಲ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ. ಸುರೇಶ್ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸಿಗರು ಯಾರೂ ನಾಯಿಗಳಲ್ಲ ಎಂದಿದ್ದಾರೆ.
ಡಿ.ಕೆ.ಸುರೇಶ್ ಅವರು ಕಟ್ಟಾ ಕಾಂಗ್ರೆಸ್ಸಿಗರು ಎಂದು ಪದ ಬಳಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿರುವ ಮೂಲ ನಿವಾಸಿಗಳು ಮತ್ತು ವಲಸಿಗರ ನಡುವಿನ ಮುಸುಕಿನ ಗುದ್ದಾಟವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ನಾಯಕತ್ವದ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮಹದೇವಪ್ಪ, ಹೈಕೋರ್ಟ್ ನಾಯಿಗಳನ್ನು ಹಿಡಿದು ಹಾಕಲು ಆದೇಶ ನೀಡಿದೆ ಎಂದಿದ್ದರು. ಇದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಮಹದೇವಪ್ಪ ಹೇಳಿಕೆಗೆ ಅಷ್ಟೇ ತಣ್ಣಗೆ ಉತ್ತರಿಸಿರುವ ಡಿ.ಕೆ.ಸುರೇಶ್, ನಾಯಿಗೆ ಇರುವ ನಿಯತ್ತು ನಿನಗಿಲ್ಲ ಎಂದು ಹಳ್ಳಿಗಳಲ್ಲಿ ಬೈಯುವುದನ್ನು ಕೇಳಿದ್ದೇವೆ ಎಂದು ಹೇಳಿದ್ದಾರ.
ನಾಯಿಗಳು ನಿಯತ್ತಿಗೆ ಹೆಸರುವಾಸಿಯಾಗಿವೆ. ಋಣವನ್ನು ನೆನಪಿನಲ್ಲಿ ಇಟ್ಟುಕೊಂಡು ಯಜಮಾನನ ಋಣ ತೀರಿಸುತ್ತವೆ. ಕೆಲವರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಬೀದಿ ನಾಯಿಗಳೂ ಇರುತ್ತವೆ. ನಾಯಿಗಳಿಗೆ ಇರುವ ನಿಯತ್ತು ಹೆಚ್ಚು ಜನಪ್ರಿಯತೆ ಪಡೆದಿದೆ ಎಂದರು.
ಸಚಿವ ಮಹದೇವಪ್ಪ ಯಾವ ಅರ್ಥದಲ್ಲಿ, ಯಾರನ್ನು ಕುರಿತು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾಯಿ ಸಾಕುವುದೇ ನಮನ್ನು ಕಾಪಾಡುತ್ತದೆ ಎಂಬ ಕಾರಣಕ್ಕೆ. ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಬೇಕಿಲ್ಲ ಎಂದರು.
ಕೆಎಂಎಫ್‌ನ ನಂದಿನಿ ಬ್ರ್ಯಾಂಡ್ ವಿರುದ್ಧ ಕೆಲವು ಕಿಡಿಗೇಡಿಗಳು ಕಾಲ ಕಾಲಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ. ಹಾಲು ಒಕ್ಕೂಟದ ಸಭೆ ಕರೆದು ಅಂತ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ನಂದಿನಿ ಮೊದಲಿನಿಂದಲೂ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಗ್ರಾಹಕರಿಗೆ, ರೈತರಿಗೆ ಯಾವತ್ತು ಅನ್ಯಾಯ ಮಾಡಿಲ್ಲ. ವ್ಯಾಪಾರದ ಪ್ರತಿಸ್ಪರ್ಧಿಗಳು ಈ ರೀತಿ ಅಪಪ್ರಚಾರದ ಪ್ರಯತ್ನಗಳನ್ನು ಮಾಡಿರಬಹುದು. ಅದನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದರು.
ಶಾಸಕರ ವಿದೇಶಿ ಪ್ರವಾಸದ ಬಗ್ಗೆ ಅಪಾರ್ಥ ಕಲ್ಪಿಸುವುದು ಬೇಡ. ಗೊಂದಲದ ನಡುವೆ ಈ ದೇಶಕ್ಕೆ ಹೋದರೆ ಮನಸ್ಸಿಗೆ ಸಮಾಧಾನವಾಗುತ್ತದೆ. ಕೆಲವರು ಅಧ್ಯಯನಕ್ಕೆ, ಇನ್ನು ಕೆಲವರು ದೇಶ ನೋಡಬೇಕೆಂದು, ಮತ್ತೆ ಕೆಲವರು ಸಂತೋಷಕ್ಕೆ ವಿದೇಶಿ ಪ್ರವಾಸ ಹೋಗುತ್ತಾರೆ ಎಂದರು.
