ಬೆಂಗಳೂರು,ಸೆ.7– ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್) ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಮಹಾರಾಷ್ಟ್ರ, ಹರಿಯಾಣ, ದೆಹಲಿ ಮತ್ತಿತರ ಕಡೆ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಇವಿಎಂ ಮೇಲೆ ದೂಷಣೆ ಮಾಡುತ್ತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆದ್ದಾಗ ಇವಿಎಂ ಸೇರಿದಂತೆ ಇಡೀ ವ್ಯವಸ್ಥೆ ಚೆನ್ನಾಗಿರುತ್ತದೆ. ಸೋತಾಗ ಇವಿಎಂ ಸರಿ ಇಲ್ಲ, ಚುನಾವಣಾ ಆಯೋಗವೂ ಸರಿ ಇಲ್ಲ. ಇದು ಅದರ ದ್ವಂದ್ವ ನೀತಿ ಎಂದು ಕಿಡಿಕಾರಿದರು.
ಕಾಂಗ್ರೆಸ್‌ಗೆ ಈಗ ಇವಿಎಂ ಬೇಡವಾಗಿ ಬ್ಯಾಲೆಟ್ ಪೇಪರ್ ನೆನಪಾಗಿದೆ. ಈ ಅನುಮಾನ ಬರಲು ಕಾರಣವೇನೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಬೇಕು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರುವಾಗ ಬ್ಯಾಲೆಟ್ ಪೇಪರ್ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.
ರಾಜ್ಯಸರ್ಕಾರದ ಕ್ರಮ ಮೂರ್ಖತನದ ಪರಮಾವಧಿ. ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಇವಿಎಂ ಸರಿ ಇಲ್ಲ ಎಂದು ಆಪಾದನೆ ಮಾಡುತ್ತಿದ್ದಾರೆ. ನಾವು ಬ್ಯಾಲೆಟ್ ಪೇಪರ್‌ಗೆ ಹೆದರುವುದಿಲ್ಲ, ಅದರ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಕಾಂಗ್ರೆಸ್ ನಾಯಕರು ಆರೋಪಿಸುವಂತೆ ಇವಿಎಂ ದೋಷ ಇದ್ದಿದ್ದರೆ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಹೇಗೆ ಬಂತು? ಎಂದು ವಿಜಯೇಂದ್ರ ಪ್ರಶ್ನೆ ಮಾಡಿದರು.ಮಹಾರಾಷ್ಟ್ರ, ಹರಿಯಾಣಗಳಲ್ಲಿ ಸೋತಿದ್ದರಿಂದ ಹತಾಶರಾಗಿ ಇಂತಹ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಎಲ್ಲವನ್ನೂ ವಿರೋಧ ಮಾಡುತ್ತಲೇ ಬಂದಿದೆ. ಇದಕ್ಕೆ ನಾವು ಕಾನೂನಿನ ಮೂಲಕ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರನ್ನು ಮಾತ್ರ ಸರ್ಕಾರ ಆಹ್ವಾನಿಸಿದೆ. ಹಿಂದೂ ಮಹಿಳೆ ದೀಪಾ ಭಾಸ್ತಿ ಅವರನ್ನು ಉದ್ಘಾಟನೆಗೆ ಏಕೆ ಆಹ್ವಾನಿಸಿಲ್ಲ? ಎಂದು ಪ್ರಶ್ನಿಸಿದರು.
ಭಾನು ಮುಷ್ತಾಕ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನಿಸಿರುವಾಗ ಅದೇ ನ್ಯಾಯ ದೀಪ ಭಾಸ್ತಿಗೂ ಸಿಗಬೇಕಿತ್ತು. ಒಬ್ಬರನ್ನು ಕರೆದು, ಇನ್ನೊಬ್ಬರನ್ನು ತಿರಸ್ಕರಿಸುವುದು ಎಷ್ಟರ ಮಟ್ಟಿಗೆ ಸರಿ? ಇದಕ್ಕೆ ಸಿಎಂ ಅವರೇ ಉತ್ತರ ಕೊಡಲಿ ಎಂದು ಒತ್ತಾಯಿಸಿದರು.ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ನ್ಯಾಯಾಲಯಕ್ಕೆ ಹೋಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ವಿಷಯ ತಿಳಿದುಕೊಂಡಿದ್ದೇವೆ ಎಂದು ವಿಜಯೇಂದ್ರ ಹೇಳಿದರು.