ಬೆಂಗಳೂರು,ಸೆ.11- ನನ್ನ ರಕ್ತ ಬೆರಕೆಯಲ್ಲ, ಅಪ್ಪಟ ಹಿಂದುತ್ವ ರಕ್ತ. ಈಗಾಗಲೇ ಹಲವಾರು ದೂರುಗಳು ನನ್ನ ಮೇಲೆ ದಾಖಲಾಗಿರುವಾಗ ಇದೊಂದು ದೂರಿಗೆ ನಾನು ಹೆದರುವ ವ್ಯಕ್ತಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಗುಡುಗಿದ್ದಾರೆ.
ಮಂಡ್ಯದ ಮದ್ದೂರಿನ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಸಿ.ಟಿ.ರವಿ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ. ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ರಕ್ತ ಅಪ್ಪಟ ಹಿಂದುತ್ವ, ಬೆರಕೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾಷ್ಟ್ರೀಯತೆ, ಹಿಂದುತ್ವ ವಿಷಯಕ್ಕೆ ಬಂದಾಗ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಈ ಹಿಂದೆ ನನ್ನ ವಿರುದ್ಧ ಅನೇಕ ದೂರುಗಳು ದಾಖಲಾಗಿದ್ದು, ಕಾನೂನಿನ ಹೋರಾಟದಲ್ಲಿ ಜಯಿಸಿದ್ದೇನೆ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ. ಬೇರೆಯವರಿಗೆ ಅದು ಪ್ರಚೋದನಕಾರಿಯಾದರೆ ನಾನೇನು ಮಾಡಲಿ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ವಿರುದ್ಧ ಮಾತನಾಡಿದಾಗ ಪ್ರಚೋದನಾಕಾರಿ ಆಗುವುದಿಲ್ಲ. ನಾವು ಮಾತನಾಡಿದಾಗ ಮಾತ್ರ ಪ್ರಚೋದನಾಕಾರಿಯಾಗುತ್ತದೆ. ಇದು ಪೊಲೀಸರ ತಾರತಮ್ಯ ನೀತಿ. ಕಾನೂನಿನ ಮೂಲಕ ಇದಕ್ಕೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಇನ್ನು ಮದ್ದೂರು ಪಿಎಸ್‌ಐ ಮಂಜುನಾಥ್ ವಿರುದ್ಧವೂ ವಾಗ್ದಾಳಿ ನಡೆಸಿದ ರವಿ, ಮಿಸ್ಟರ್ ಮಂಜುನಾಥ್… ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ, ಸುಪ್ರೀಂ ಕೋರ್ಟ್ ಆದೇಶವಿದೆ. ನನ್ನ ಮೇಲೆ ದಾಖಲಿಸಿ ಸರ್ಕಾರಕ್ಕೆ ನಿಯತ್ತು ತೋರಿಸಬೇಡಿ.
ನಾಳೆ ನೀನು ಮದ್ದೂರು ವ್ಯಾಪ್ತಿಯಲ್ಲಿ ಸುಮೋಟೋ ಕೇಸ್ ಹಾಕಬೇಕು. ಯಾರ್ಯಾರು ಬೆಳಗ್ಗೆ 5ಕ್ಕೆ ಕೂಗುತ್ತಾರೆ. ಅವರ ಮೇಲೆ ದೂರು ಹಾಕಿ ಖಾಕಿ ಬಟ್ಟೆಗೆ ನಿಯತ್ ಇದೆ ಎಂದು ಸಾಬೀತು ಮಾಡಿ ಎಂದು ಏಕವಚನದಲ್ಲೇ ಸವಾಲು ಹಾಕಿದರು.
ದೂರುಗಳು ನನಗೆ ಹೊಸದಲ್ಲ, ಇದಕ್ಕೆ ಹೆದರುವ ಜಾಯಮಾನದವನೂ ನಾನಲ್ಲ. ನೀವು ಕಲ್ಲು ಹೊಡೆದು, ತೊಡೆ ತಟ್ಟಿ, ಪೆಟ್ರೋಲ್ ಬಾಂಬ್ ಹಾಕಿದರೆ ಸಹಿಸುವ ಕಾಲ ಮುಗಿದಿದೆ ಎಂದಿದ್ದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳಿದ್ದೆ, ಪ್ರೀತಿಗೆ ಪ್ರೀತಿ-ಕಲ್ಲಿಗೆ ಕಲ್ಲು ಎಂದಿದ್ದೆ. ನನ್ನ ಹೇಳಿಕೆಗೆ ಇಂದಿಗೂ ನಾನು ಬದ್ಧ ಎಂದು ಸಮರ್ಥನೆ ಮಾಡಿಕೊಂಡರು.
ಶಿವನ ನೆಲದಲ್ಲಿ ಅಲ್ಲಾ ಒಬ್ಬನೇ ಎಂದರೆ ಉಳಿದ ದೇವರ ಅಸ್ತಿತ್ವ ಏನು?ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವರು ನಾನು ಹಿಂದೂ ಎನ್ನುತ್ತಾರೆ, ನಾಮ ಹಾಕಿಕೊಂಡು, ನಾಮ ಅಳಿಸಿ ಟೋಪಿ ಹಾಕಿ ನಮಾಜ್ ಮಾಡುವುದು ಇಂತಹ ತಾರಾತಕಡಿ, ನಾಟಕದ ಜಾಯಮಾನದವನು ನಾನಲ್ಲ ಎಂದು ವಿರೋಧಿಗಳ ವಿರುದ್ಧ ಗುಡುಗಿದರು.