ಬೆಂಗಳೂರು, ನ.24- ಕಳೆದ ಒಂದು ತಿಂಗಳಿನಿಂದಲೂ ತೆರೆ ಮರೆಯಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಸಿಬಿಐ ತನಿಖೆಯ ಅನುಮತಿ ವಿಚಾರ ಕೊನೆಗೂ ಸಂಪುಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಮಹತ್ವದ ಘಟ್ಟಕ್ಕೆ ತಲುಪಿದೆ.
ಸಚಿವ ಸಂಪುಟದ ನಿರ್ಣಯದ ಬಗ್ಗೆ ವಿಪಕ್ಷಗಳಷ್ಟೇ ಅಲ್ಲ ಸ್ವಪಕ್ಷದಲ್ಲೂ ತೀವ್ರ ಅಸಮಾಧಾನಗಳು ಕೇಳಿ ಬರುತ್ತಿವೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯಗಳನ್ನು ಕಡೆಗಣಿಸಿ ಬಿಜೆಪಿಯ ದೆಹಲಿ ನಾಯಕರ ಒತ್ತಡಕ್ಕೆ ಮಣಿದು ಸಿಬಿಐ ತನಿಖೆಗೆ ಮುಖ್ಯಕಾರ್ಯದರ್ಶಿ ಅವರಿಂದ ಅನುಮತಿ ಕೊಡಿಸಿದ್ದರು ಎಂಬ ಆರೋಪಗಳಿವೆ.
ಸಿಬಿಐ ಈಗಾಗಲೇ ಶೇ.80ರಷ್ಟು ತನಿಖೆ ಮುಗಿದಿದೆ ಎಂದು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರಿಂದಾಗಿ ಡಿ.ಕೆ.ಶಿವಕುಮಾರ್ ಅವರು ಸಲ್ಲಿಸಿದ್ದ ತಗಾದೆ ಅರ್ಜಿ ಸುಪ್ರೀಂಕೋರ್ಟ್‍ನಲ್ಲಿ ವಜಾಗೊಂಡಿತ್ತು.
ಹೈಕೋರ್ಟ್‍ನಲ್ಲೇ ಪ್ರಕರಣ ಇತ್ಯರ್ಥಗೊಳಿಸುವಂತೆ ಸೂಚನೆ ನೀಡಿತ್ತು. ಹೈಕೋರ್ಟ್ ಕೂಡ ಸಿಬಿಐ ವಾದವನ್ನು ಪರಿಗಣಿಸಿ ತನಿಖೆಗೆ ತಡೆ ನೀಡಲು ನಿರಾಕರಿಸಿತ್ತು.
ಈಗ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿದ ನಿರ್ಧಾರವನ್ನು ಹಿಂಪಡೆದುಕೊಳ್ಳುವ ಮೂಲಕ ಸಾಂವಿಧಾನಿಕ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಗುಜರಾತ್‍ನ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಬೇಕಿದ್ದ ಸಮಯದಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು. ಆ ವೇಳೆ ಕಾಂಗ್ರೆಸ್ ನೆರವಿಗೆ ಬಂದಂತಹ ಡಿ.ಕೆ.ಶಿವಕುಮಾರ್ ಅವರು ಅಲ್ಲಿನ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಟ್‍ನಲ್ಲಿರಿಸಿ ಭದ್ರತೆ ಒದಗಿಸಿದ್ದರು.
ಡಿಕೆಶಿ ವಿರುದ್ಧ ಸಿಬಿಐ ತನಿಖೆ ಕಾನೂನು ಬಾಹಿರ: ಸಚಿವ ಪ್ರಿಯಾಂಕ್ ಖರ್ಗೆ
ಆ ವೇಳೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. 58 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿ ಡಿ.ಕೆ.ಶಿವಕುಮಾರ್ ಸೆರೆವಾಸ ಅನುಭವಿಸಿದ್ದರು. ಒಂದೇ ಸ್ವರೂಪದ ಪ್ರಕರಣದಲ್ಲಿ ಪದೇ ಪದೇ ಬಂಧಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಹದ್ಧುಬಸ್ತಿನಲ್ಲಿಡಲು ಒತ್ತಾಯ ಪೂರ್ವಕವಾಗಿ ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು ಎಂಬ ಆರೋಪಗಳಿವೆ.
ಇದನ್ನು ಡಿ.ಕೆ.ಶಿವಕುಮಾರ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದರು. ತನಿಖೆ ಅಂತಿಮ ಘಟ್ಟದಲ್ಲಿದೆ ಎಂದು ಸಿಬಿಐ ವಾದಿಸಿದ್ದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ತಿರುಗೇಟು ನೀಡಲು ಮುಂದಾಗಿದೆ.
ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸುವ ಪ್ರಸ್ತಾವನೆಗೆ ಅಂಗೀಕಾರ ನೀಡುವ ಮೂಲಕ ಸಂಪುಟ ಸಭೆ ಕಾನೂನು ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಸಂಪುಟದಲ್ಲಿ ಪ್ರಸ್ತಾವನೆಯ ಅಂಗೀಕಾರಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ಕಳೆದ ಒಂದು ತಿಂಗಳಿನಿಂದಲೂ ಭಾರೀ ಲಾಬಿ ನಡೆಸಿದ್ದರು. ದೆಹಲಿಯಿಂದ ಎಐಸಿಸಿಯ ರಣದೀಪ್‍ಸಿಂಗ್ ಸುರ್ಜೆವಾಲ ಅವರು ಬೆಂಗಳೂರಿಗೆ ಬಂದು ಮುಖ್ಯಮಂತ್ರಿಯವರೊಂದಿಗೆ ವಿಶೇಷ ಸಭೆ ನಡೆಸಿದ್ದು ಕೂಡ ಇದೇ ಕಾರಣಕ್ಕೆ ಎಂದು ಹೇಳಲಾಗಿದೆ.
ಡಿ.ಕೆ.ಶಿವಕುಮಾರ್ ಅವರ ಒತ್ತಡವನ್ನು ನಿಭಾಯಿಸಲಾಗದೆ, ಗೃಹ ಸಚಿವ ಪರಮೇಶ್ವರ್ ಅವರು ತಮ್ಮ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಭೋಜನ ಕೂಟ ನಡೆಸಿ ಚರ್ಚಿಸಿದ್ದರು.
ಸಂಪುಟದ ಬಹುತೇಕ ಸಚಿವರು ಈ ರೀತಿ ನಿರ್ಣಯ ತೆಗೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.
ನಾಳೆ ನ್ಯಾಯಾಲಯದಲ್ಲಿ ಸಂಪುಟದ ನಿರ್ಣಯಕ್ಕೆ ಹಿನ್ನಡೆಯಾದರೆ ಸರ್ಕಾರಕ್ಕೆ ಮುಖಭಂಗವಾಗಲಿದೆ. ಲೋಕಸಭೆ ಚುನಾವಣೆ ವೇಳೆಗೆ ಇದು ರಾಜಕೀಯವಾಗಿ ಭಾರೀ ಹಾನಿ ಮಾಡುವ ಆತಂಕ ಇದೆ ಎಂದು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೆ, ಅದ್ಯಾವುದನ್ನೂ ಲೆಕ್ಕಸಿದೆ ನಿರ್ಣಯ ತೆಗೆದು ಕೊಳ್ಳಲೇಬೇಕೆಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ.
ಸರ್ಕಾರದಿಂದ ದರೋಡೆಕೋರರ ರಕ್ಷಣೆ: ಎಚ್‍ಡಿಕೆ ಆಕ್ರೋಶ
ರಾಜಕೀಯವಾಗಿ ಯಾವುದೇ ಪರಿಣಾಮವಾದರೂ ನಾನು ಎದುರಿಸುತ್ತೇನೆ. ಸಂಪುಟದಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಸರ್ಕಾರ ಈ ಹಿಂದಿನ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ವಾದವಾಗಿತ್ತು ಎನ್ನಲಾಗಿದೆ.
ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ್ ಅಸಮಾಧಾನಗೊಂಡಿದ್ದರು. ಪಕ್ಷ ಹಾಗೂ ಸರ್ಕಾರದ ಹಲವು ಸಭೆ-ಸಮಾರಂಭಗಳಿಂದ ದೂರ ಉಳಿಯಲಾರಂಭಿಸಿದ್ದರು ಎಂದು ಹೇಳಲಾಗಿದೆ.
ಒಂದು ತಿಂಗಳಿನಿಂದ ನಡೆದ ಸಂಘರ್ಷ ಮಹತ್ವದ ಘಟ್ಟಕ್ಕೆ ಬಂದಿದೆ. ಸಂಪುಟ ಸಭೆಯ ನಿರ್ಣಯದ ಬಳಿಕ ಕಾನೂನಾತ್ಮಕ ವಾದ-ಪ್ರತಿವಾದಗಳು ಮುಂದುವರೆಯುವ ಸಾಧ್ಯತೆಗಳಿವೆ.