Friday, November 22, 2024
Homeಇದೀಗ ಬಂದ ಸುದ್ದಿಸಾರಿಗೆ ಇಲಾಖೆ ಖಾಲಿ ಇರುವ 9000 ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

ಸಾರಿಗೆ ಇಲಾಖೆ ಖಾಲಿ ಇರುವ 9000 ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ನ.24- ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ ಒಂಭತ್ತು ಸಾವಿರ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಗ್ಯಾರಂಟಿಗೆ ಶತಕೋಟಿ ಸಂಭ್ರಮ, ಮಹಿಳಾ ಸಬಲೀಕರಣದ ಪಯಣದಲ್ಲಿ ಮಹತ್ವದ ಮೈಲಿಗಲ್ಲು, ಸಾರಿಗೆ ಸಂಸ್ಥೆಗಳ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ಏಳು ವರ್ಷದಿಂದ ಸಾರಿಗೆ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳು ನೇಮಕವಾಗಿಲ್ಲ. ಈ ಅವಧಿಯಲ್ಲಿ 13 ಸಾವಿರ ಸಿಬ್ಬಂದಿ ನಿವೃತ್ತಿಯಾಗಿದ್ದಾರೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ 5,500 ಹೊಸ ಬಸ್‍ಗಳನ್ನು ಸೇರ್ಪಡೆ ಮಾಡಲಾಗುವುದು. ಸಂಕಷ್ಟದ ಸಂದರ್ಭದಲ್ಲೂ ಶಕ್ತಿ ಯೋಜನೆ ಮೂಲಕ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಯಿತು ಎಂದು ಹೇಳಿದರು.

ಡಿಕೆಶಿ ವಿರುದ್ಧ ಸಿಬಿಐ ತನಿಖೆ ಕಾನೂನು ಬಾಹಿರ: ಸಚಿವ ಪ್ರಿಯಾಂಕ್ ಖರ್ಗೆ

ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷ ನೀಡಿದ್ದ 5 ಗ್ಯಾರಂಟಿಗಳಲ್ಲಿ ಶಕ್ತಿಯೂ ಒಂದಾಗಿದ್ದು, ಅಧಿಕಾರಕ್ಕೆ ಬಂದ 15 ದಿನದಲ್ಲೆ ಜಾರಿಗೆ ತಂದಿದ್ದೇವೆ. ದೇಶದಲ್ಲಿಯೇ ಇದು ದೊಡ್ಡ ಕಾರ್ಯಕ್ರಮ. ತಮಿಳುನಾಡು ಮತ್ತು ದೆಹಲಿಯಲ್ಲಿ ನಗರ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿದೆ.

ಮಹಾರಾಷ್ಟ್ರದಲ್ಲಿ ಶೇ.50ರಷ್ಟು ರಿಯಾಯ್ತಿ ಇದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವಿದೆ ಎಂದು ಸಚಿವರು ತಿಳಿಸಿದರು. ಶಕ್ತಿ ಯೋಜನೆ ಆರಂಭದಿಂದ ಈತನಕ 1.58 ಲಕ್ಷ ಟ್ರಿಪ್‍ಗಳಲ್ಲಿ ಶತಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು, ಈ ಯೋಜನೆ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ವಿದ್ಯಾರ್ಥಿನಿಯರು, ಮಹಿಳೆಯರು ಪ್ರವಾಸಿ ಕೇಂದ್ರಗಳು, ಯಾತ್ರಾ ಸ್ಥಳಗಳಿಗೆ, ದೇವಾಲಯಗಳಿಗೆ ಖುಷಿಯಿಂದ ಹೋಗುತ್ತಿದ್ದಾರೆ ಎಂದರು. ಕೆಎಸ್‍ಆರ್‍ಟಿಸಿಯಲ್ಲಿ 1 ಕೋಟಿ ರೂ.ವರೆಗೂ ಹಾಗು ಇತರೆ ಸಂಸ್ಥೆಗಳಲ್ಲಿ 50 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ ಒದಗಿಸಲಾಗಿದ್ದು, ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. 15 ವರ್ಷ ಅಪಘಾತ ರಹಿತ ವಾಹನ ಚಾಲನೆ ಮಾಡಿದ ಚಾಲಕರಿಗೆ ಮುಖ್ಯಮಂತ್ರಿಗಳು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ. ದೇಶದಲ್ಲೇ ಅತಿಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಕೆಎಸ್‍ಆರ್‍ಟಿಸಿಗೆ ಲಭಿವಿಸಿವೆ ಎಂದರು.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಶಾಸಕ ಸೌಮ್ಯ ರೆಡ್ಡಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

RELATED ARTICLES

Latest News