ಚಿಕ್ಕಬಳ್ಳಾಪುರ, ಸೆ 17– ಒಂದೇ ದಿನ ಒಂದೇ ಕರಡಿ ಇಬ್ಬರು ರೈತರ ಮೇಲೆ ದಾಳಿ ಮಾಡಿರುವ ಘಟನೆ ತಾಲ್ಲೂಕಿನ ಪೋಶೆಟ್ಟಿಹಳ್ಳಿ ಬಳಿಯ ಗುರುಕಲನಾಗೇನಹಳ್ಳಿಯಲ್ಲಿ ನಡೆದಿದೆ. ಕರಡಿಯಿಂದ ದಾಳಿಗೆ ಒಳಗಾದ ಗಾಯಾಳುಗಳನ್ನು ತಾಲೂಕಿನ ಬಾಲಕುಂಟಹಳ್ಳಿಯ ಕೃಷ್ಣಪ್ಪ ಹಾಗೂ ಗುರುಕಲನಾಗೇನಹಳ್ಳಿ ಗ್ರಾಮದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ.
ಗುರುಕಲನಾಗೇನಹಳ್ಳಿ ಗ್ರಾಮದ ನರಸಿಂಹಮೂರ್ತಿ ತಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಪ್ರತ್ಯಕ್ಷವಾದ ಕರಡಿ ಅವರ ಮೇಲೆ ದಾಳಿ ನಡೆಸಿದೆ. ಕರಡಿಯ ದಾಳಿಗೆ ನರಸಿಂಹಮೂರ್ತಿಯ ಎಡಗಣ್ಣು, ಹಣೆ, ಮುಖ ಮತ್ತು ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ದಾಳಿಯಿಂದ ಕಂಗಾಲಾದ ನರಸಿಂಹಮೂರ್ತಿ ಕಿರುಚಾಟ ಕೇಳಿ ಅಕ್ಕಪಕ್ಕದ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಬಂದು ಕರಡಿಯನ್ನು ಓಡಿಸಿದ್ದಾರೆ. ಅಲ್ಲಿಂದ ಕಾಲ್ಕಿತ್ತ ಕರಡಿ ಬಾಳೆ ತೋಟವೊಂದರಲ್ಲಿ ಸೇರಿಕೊಂಡಿದೆ.
ಬಾಲಕುಂಟಹಳ್ಳಿ ಗ್ರಾಮದ ಕೃಷ್ಣಪ್ಪ ಗುರುಕುಲನಾಗೇನಹಳ್ಳಿ ಬಳಿಯ ತಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಬಾಳೆ ತೋಟದಿಂದ ಏಕಾಏಕಿ ಬಂದ ಕರಡಿಯು ಅವರ ಎಡಗೈ ಕಚ್ಚಿ ಹಿಡಿದು ಪರಚಿ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವರು ಕೂಗಿಕೊಂಡಾಗ ಅಕ್ಕಪಕ್ಕದ ಜನತೆ ಬಂದಿದ್ದಾರೆ. ಜನ ಬಂದ ಹಿನ್ನೆಲೆಯಲ್ಲಿ ಕರಡಿ ಅವರನ್ನು ಬಿಟ್ಟು ಅಲ್ಲಿಂದ ಪಲಾಯನ ಮಾಡಿದೆ.
ಸ್ಥಳೀಯರು ಕೂಡಲೆ ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.