Saturday, September 20, 2025
Homeಬೆಂಗಳೂರುಬೆಂಗಳೂರಲ್ಲಿ ಬೆಚ್ಚಗೆ ಮಲಗಿದ್ದ ರೌಡಿಗಳ ಚಳಿ ಬಿಡಿಸಿದ ಪೊಲೀಸರು

ಬೆಂಗಳೂರಲ್ಲಿ ಬೆಚ್ಚಗೆ ಮಲಗಿದ್ದ ರೌಡಿಗಳ ಚಳಿ ಬಿಡಿಸಿದ ಪೊಲೀಸರು

Police warn rowdy people in Bengaluru

ಬೆಂಗಳೂರು,ಸೆ.20- ಮನೆಗಳಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಹಾಗೂ ಬಾರ್‌ಗಳಲ್ಲಿ ನಶೆ ಏರಿಸಿಕೊಳ್ಳುತ್ತಿದ್ದ ರೌಡಿಗಳಿಗೆ ನಗರ ಪೊಲೀಸರು ರಾತ್ರಿ ಚಳಿ ಬಿಡಿಸಿದ್ದಾರೆ. ನಗರದ ಎಲ್ಲಾ 11 ವಿಭಾಗಗಳ ಹಾಗೂ ಸಿಸಿಬಿ ಪೊಲೀಸರು ಏಕಕಾಲದಲ್ಲಿ ರೌಡಿಗಳ ಮನೆಗಳು ಹಾಗೂ ವೈನ್ಸ್ ಸ್ಟೋರ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ರಾತ್ರಿ 11 ಗಂಟೆಯಿಂದ ನಗರದಾದ್ಯಂತ ರೌಡಿಗಳ ಮನೆಗಳ ಮೇಲೆ ದಿಢೀರ್‌ ದಾಳಿ ನಡೆಸಿ ಇಂದು ಬೆಳಗಿನ ಜಾವ 3 ಗಂಟೆಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು.

- Advertisement -

ಸಾರ್ವಜನಿಕರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಅಪರಾಧವನ್ನು ನಿಯಂತ್ರಿಸುವುದು ಮತ್ತು ಅಪರಾಧಿ ಅಂಶಗಳ ಜಾಲವನ್ನು ಧ್ವಂಸ ಮಾಡುವ ದೃಢ ಮತ್ತು ಮುಂಚೂಣಿ ಕ್ರಮವಾಗಿ ನಗರ ಪೊಲೀಸರು ಈ ದಾಳಿ ನಡೆಸಿದ್ದಾರೆ. ತಲೆ ಮರೆಸಿಕೊಂಡಿದ್ದ ರೌಡಿಗಳು,ವಾರಂಟುದಾರರು ಮತ್ತು ಪ್ರ್ಲೊಕೇಮ್‌ ಮಾಡಿದ ಅಪರಾಧಿಗಳನ್ನು ಪತ್ತೆಹಚ್ಚುವುದು, ಜವಬ್ದಾರಿತನವನ್ನು ಹೆಚ್ಚಿಸಿ ತಡೆಗಟ್ಟುವಿಕೆಗೆ, ಸಮುದಾಯದ ಭದ್ರತೆ ಮತ್ತು ಕಲ್ಯಾಣಕ್ಕೆ ಈ ದಾಳಿ ಸಹಕಾರಿಯಾಗಿದೆ.

ರಾತ್ರಿಯಿಂದ ಬೆಳಗಿನ ಜಾವದವರೆಗೂ ಒಟ್ಟು 1478 ರೌಡಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಈ ಪೈಕಿ 165 ಹಳೆ ಆರೋಪಿಗಳ ಮನೆಗಳು, ತಲೆಮರೆಸಿಕೊಂಡಿದ್ದ 3 ರೌಡಿಗಳು, ವಾರೆಂಟ್‌ ಜಾರಿಯಾದರೂ ಪತ್ತೆಯಾಗದ 7 ರೌಡಿಗಳು, ಪ್ರ್ಲೊಕೇಮ್‌ ಮಾಡಿದ ಮೂವರು ರೌಡಿಗಳು ಪತ್ತೆಯಾಗಿದ್ದಾರೆ.

ದಾಳಿಯ ಸಂದರ್ಭದಲ್ಲಿ ಒಟ್ಟು 124 ಪ್ರಕರಣಗಳು ಹಾಗೂ ಮಾದಕ ವಸ್ತು ಬಳಕೆದಾರರ ವಿರದ್ಧ 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರ ಮಾರ್ಗದರ್ಶನದಲ್ಲಿ, ಮೂವರು ಹೆಚ್ಚುವರಿ ಪೊಲೀಸ್‌‍ ಆಯುಕ್ತರು, 13 ಮಂದಿ ಡಿಸಿಪಿಗಳು, ನಗರದ ಎಲ್ಲಾ ವಿಭಾಗಗಳ ಎಸಿಪಿಗಳು, ಇನ್‌್ಸಪೆಕ್ಟರ್‌ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.

ಈಶಾನ್ಯ ವಿಭಾಗದಲ್ಲಿ ನಗರ ಪೊಲೀಸರು 169 ರೌಡಿಗಳ ಮನೆಗಳ ಮೇಲೆ ದಾಳಿ ನಡೆದರೆ, ಉತ್ತರ -179, ಪೂರ್ವ-247, ಪಶ್ಚಿಮ-222, ಎಲೆಕ್ಟ್ರಾನಿಕ್‌ ಸಿಟಿ -100, ಆಗ್ನೇಯ-120,ಕೇಂದ್ರ ವಿಭಾಗ-20, ವಾಯುವ್ಯ-102, ವೈಟ್‌ಫೀಲ್‌್ಡ-140 ರೌಡಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

ಸಿಸಿಬಿ ಪೊಲೀಸರು 179 ರೌಡಿಗಳ ಮನೆಗಳ ಮೇಲೆ ಹಾಗೂ ಬಾರ್‌ಗಳ ಮೇಲೆ ದಾಳಿ ನಡೆಸಿ ರೌಡಿಗಳಿಗೆ ಚಳಿಯಲ್ಲೂ ಬೆವರಿಳಿಸಿದ್ದಾರೆ.ನಿರ್ಜನ (ಅಪಾಯದ)ಪ್ರದೇಶಗಳಲ್ಲಿ ನಿರಂತರ ನಿಗಾ ಮತ್ತು ಗುಪ್ತಚರ ಆಧಾರಿತ ಕಾರ್ಯಾಚರಣೆಗಳು ಮುಂದುವರೆಯುತ್ತವೆ. ಹಾಗೂ ದಾಳಿ ಸಂದರ್ಭದಲ್ಲಿ ಪತ್ತೆಯಾದ ರೌಡಿಗಳ ಪರಿಶೀಲನೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾರ್ವಜನಿಕರ ಭದ್ರತೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ನಗರ ಪೊಲೀಸ್‌‍ ಆಯುಕ್ತರು ತಮ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ, ಜೊತೆಗೆ ಕಾನೂನು ಪ್ರಕ್ರಿಯೆಯನ್ನು ಪಾಲಿಸುವುದನ್ನು ಖಚಿತಪಡಿಸಿದ್ದಾರೆ.

RELATED ARTICLES

Latest News