ಮೈಸೂರು,ಸೆ.24– ಜಾತಿ ಗಣತಿಯಲ್ಲಿ ಯಾವುದೇ ಗೊಂದಲ, ಸಮಸ್ಯೆಗಳಿಲ್ಲ. ಆದರೆ ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025 ರ ಅಂಗವಾಗಿ ಕಲಾಮಂದಿರದಲ್ಲಿ ಆಯೋಜಿಸಿರುವ ಮಕ್ಕಳ ದಸರಾವನ್ನು ದೀಪ ಬೆಳಗುವ ಮೂಲಕ ಸಚಿವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಾವು ಮಾಡುತ್ತಿರುವುದು ಜಾತಿ ಗಣತಿಯಲ್ಲ. ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಜನ ಯಾವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕಲ್ವಾ.
ಅದಕ್ಕಾಗಿ ಈ ಸಮೀಕ್ಷೆ ನಡೆಯುತ್ತಿದೆ. ನಿನ್ನೆಯಿಂದಷ್ಟೇ ಆರಂಭವಾಗಿದೆ. ಎಲ್ಲಿಯೂ ಏನು ಸಮಸ್ಯೆ ಉಂಟಾಗಿಲ್ಲ. ಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಲ್ಲಾ ಕಡೆಯೂ ಚೆನ್ನಾಗಿ ನಡೆಯುತ್ತಿದೆ. ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿ ಗಣತಿ ಮಾಡುತ್ತಿರುವುದು ಕೇಂದ್ರ ಸರ್ಕಾರ ಎಂದರು.
ಕೇಂದ್ರದಿಂದ ಜಿಎಸ್ಟಿ ಪರಿಷ್ಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಈಗ ಎಲ್ಲರಿಗೂ ಜಿಎಸ್ಟಿ ಲಡ್ಡು ತಿನ್ನಿಸುತ್ತಿದೆ. ಜಿಎಸ್ಟಿ ಹೊಸ ನೀತಿಯಿಂದ ದೊಡ್ಡ ಬದಲಾವಣೆ ಆಗುತ್ತಿಲ್ಲ. ಜಿಎಸ್ಟಿ ಹೊರೆ ಕಮಿ ವಿಚಾರವನ್ನು ನೋಡುವುದಾದರೆ ರಾಜ್ಯದ ಮಟ್ಟಿಗೆ ತಲಾ 57 ರೂ ಅಷ್ಟೇ. ಆದರೆ ಸಿದ್ದರಾಮಯ್ಯ ನವರು ಪ್ರತಿ ತಿಂಗಳು 2 ಸಾವಿರ ಕೊಡುತ್ತಿದ್ದಾರೆ. 200 ಯುನಿಟ್ ವಿದ್ಯುತ್ ನೀಡಿ ಮನೆ ಬೆಳಗುತ್ತಿದ್ದಾರೆ.
ಜಿಎಸ್ಟಿ ಪಾಲು ರಾಜ್ಯಕ್ಕೆಷ್ಟು ಕಡಿಮೆ ಸಿಗುತ್ತಿದೆ ಎಂದು ಚಿಂತನೆ ಮಾಡಬೇಕು. ಇದರ ಬಗ್ಗೆ ನಮ ಸಂಸದರು ಧ್ವನಿ ಎತ್ತದೆ ಇರುವುದು ಬೇಸರ ತಂದಿದೆ. ಜಿಎಸ್ಟಿ ಲಡ್ಡು ಕೇವಲ ಬಿಜೆಪಿಗರಿಗಷ್ಟೇ ಸಿಹಿಯಾಗಿದೆ. ಆದರೆ ರಾಜ್ಯದ ಜನರಿಗೆ ಕಹಿಯಾಗಿದೆ ಎಂದರು.ಇದೇ ವೇಳೆ ಎಂ.ಎಲ್.ಸಿ ಎನ್.ಮಂಜೇಗೌಡ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.