– ವಿ.ರಾಮಸ್ವಾಮಿ ಕಣ್ವ
ಒಂದ್ ಕಾಲದಲ್ಲಿ ದೂರವಾಣಿ ದೂರವಾಗಿಯೇ ಉಳಿದಿತ್ತು. ಉಳ್ಳವರು ಮಾತ್ರ ಹಲೋ ಎನ್ನುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಮೊಬೈಲ್ ಇಲ್ಲದ ಕೈಗಳಿಲ್ಲ. ಹಣ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರತಿಯೊಬ್ಬ ಶ್ರೀಸಾಮಾನ್ಯನ ಬಳಿ ಈಗ ವಿವಿಧ ರೀತಿಯ ಮೊಬೈಲ್ ಸೆಟ್‌ಗಳು ಇದ್ದೇ ಇರುತ್ತವೆ. ಇನ್ನೂ ಕೆಲವರ ಬಳಿ ಎರಡಲ್ಲ, ಮೂರು ಸೆಟ್‌ಗಳು ಸಹ ಇವೆ.
ಮೊಬೈಲ್ಲೇ ಸರ್ವಸ್ವ:
ಸಂಪರ್ಕ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯಿಂದ ಈಗ ಎಲ್ಲರ ಕೈಗಳಲ್ಲೂ ಮೊಬೈಲ್‌ಗಳು ರಿಂಗಾಣಿಸುತ್ತಿವೆ. ಬಹುತೇಕರ ದೈನಂದಿನ ಜೀವನ ಮೊಬೈಲ್‌ನಿಂದಲೇ ಆರಂಭವಾಗುತ್ತದೆ. ಅಂಗೈನಲ್ಲೇ ಕನ್ನಡಿ ಎನ್ನುವಂತೆ ಸುದ್ದಿ, ಸಿನಿಮಾ, ಧಾರಾವಾಹಿ, ಆರೋಗ್ಯ ಸೇರಿದಂತೆ ಹಲವಾರು ಮಾಹಿತಿಗಳು ಕುಳಿತಲ್ಲೇ, ನಿಂತಲ್ಲೇ ವೀಕ್ಷಿಸಬಹುದಾಗಿದೆ. ವ್ಯಾಪಾರ ಕ್ಷೇತ್ರದಲ್ಲೂ ಮೊಬೈಲ್ ತನ್ನ ಛಾಪು ಮೂಡಿಸಿವೆ.
ಇದರಿಂದ ದಿನಪತ್ರಿಕೆಗಳನ್ನು ಓದುವುದು, ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದು, ಬ್ಯಾಂಕ್‌ಗಳಿಗೆ ತೆರಳಿ ಹಣಕಾಸು ವ್ಯವಹಾರ ಮಾಡುವುದು, ಸ್ನೇಹಿತರು ಹಾಗೂ ನೆಂಟರ ಮನೆಗಳಿಗೆ ಹೋಗುವುದನ್ನು ಬಹುತೇಕ ಮಂದಿ ಮರೆತುಬಿಟ್ಟಿದ್ದಾರೆ. ಕೆಲವರಂತೂ ಕುಟುಂಬವನ್ನೇ ಬಿಟ್ಟಿಯಾರು, ಆದರೆ ಮೊಬೈಲ್‌ಅನ್ನು ಬಿಟ್ಟು ಇರಲಾರರು. ಅಷ್ಟರಮಟ್ಟಿಗೆ ಅದರ ಗೀಳು ಅಂಟಿಸಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಮೊಬೈಲ್ ನೋಡದಿದ್ದರೆ ನಿದ್ರೆಯೇ ಬರುವುದಿಲ್ಲವಂತೆ. ನಿಜ, ಮೊಬೈಲ್ ಬಳಸುವುದರಿಂದ ಬಹಳಷ್ಟು ಉಪಯೋಗಗಳಿವೆ. ಇದರಲ್ಲಿ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಒಳ್ಳೆಯದಕ್ಕೆ ಮಾತ್ರ ಬಳಸಬೇಕು. ಇಲ್ಲದಿದ್ದರೆ ಸಂಕಷ್ಟ ಎದುರಾಗುತ್ತದೆ.
ಜೋಪಾನ ಬಲು ಕಷ್ಟ:
ಒಮೆ ಮೊಬೈಲ್ ಸೆಟ್ ಕೊಳ್ಳುವುದು ಸುಲಭ. ಆದರೆ, ಅದನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಕಷ್ಟ. ಏಕೆಂದರೆ ಬಸ್, ರೈಲುಗಳಲ್ಲಿ ಪ್ರಯಾಣಿಸುವಾಗ, ಸ್ನೇಹಿತರ ಜೊತೆ ಕುಳಿತು ಹರಟೆ ಹೊಡೆಯುವಾಗ, ಹೊಟೇಲ್‌ಗಳಲ್ಲಿ ತಿಂಡಿ, ಊಟ ಮಾಡುವಾಗ ಕರೆ ಬಂದರೆ ಮಾತನಾಡಿ ಅಲ್ಲೇ ಇಟ್ಟು ತೆಗೆದುಕೊಂಡು ಹೋಗುವುದನ್ನೇ ಮರೆತುಬಿಡುತ್ತೇವೆ. ಯಾರಾದರೂ ಪ್ರಾಮಾಣಿಕರಿಗೆ ಅಥವಾ ಸ್ನೇಹಿತರಿಗೆ ಸಿಕ್ಕಿದಾಗ ಮಾತ್ರ ಮೊಬೈಲ್ ವಾಪಸ್ ತಂದು ಕೊಡುತ್ತಾರೆ. ಕಳ್ಳಕಾಕರ ಕೈಗೆ ಸಿಕ್ಕಿದರೆ ಅಪಾಯ ಕಟ್ಟಿಟ್ಟ ಬುತ್ತಿ..! ಬೆಂಗಳೂರು ನಗರದಲ್ಲಿ ಈ ಹಿಂದೆ ಸಿಕ್ಕ ಸಿಕ್ಕ ರಸ್ತೆಗಳಲ್ಲಿ ಹಗಲು-ರಾತ್ರಿ ಎನ್ನದೆ ದರೋಡೆಕೋರರು ಸರ ಅಪಹರಣ ಮಾಡುತ್ತಿದ್ದರು. ಈಗ ಅದೇ ರೀತಿ ಮೊಬೈಲ್ ಸೆಟ್‌ಗಳ ಅಪಹರಣವಾಗುತ್ತಿವೆ.
2023ರಲ್ಲಿ 385 ಮತ್ತು 2024ರಲ್ಲಿ 296 ಮೊಬೈಲ್ ಸೆಟ್‌ಗಳನ್ನು ದರೋಡೆಕೋರರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದರಲ್ಲಿ ಭಾರೀ ಬೆಲೆಯ ಸೆಟ್‌ಗಳೂ ಸೇರಿವೆ. ಕದ್ದ ದ್ವಿಚಕ್ರ ವಾಹನಗಳಲ್ಲಿ ನಗರದಲ್ಲಿ ಸುತ್ತಾಡುವ ದರೋಡೆಕೋರರು ರಾತ್ರಿ ವೇಳೆ ಒಂಟಿಯಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದು ಹೋಗುವವರು ಅಥವಾ ನಿರ್ಜನ ಪ್ರದೇಶದಲ್ಲಿ ನಿಂತು ಕ್ಯಾಬ್ ಬುಕ್ ಮಾಡುವವರು ಅಥವಾ ಡೆಲಿವರಿ ಮಾಡಲು ರಸ್ತೆ ಬದಿ ನಿಂತಿರುವ ಡೆಲಿವರಿ ಬಾಯ್‌ಗಳನ್ನೇ ಗುರಿ ಮಾಡಿಕೊಂಡು ಅವರುಗಳ ಮೊಬೈಲ್‌ಗಳಣ್ನು ಕಿತ್ತುಕೊಂಡು ಪರಾರಿಯಾಗುತ್ತಾರೆ.ಇನ್ನೂ ಕೆಲವು ದರೋಡೆಕೋರರು ತಡರಾತ್ರಿ ನಡೆದು ಹೋಗುವ ವ್ಯಕ್ತಿಗಳನ್ನೇ ಅಡ್ಡಗಟ್ಟಿ ಬೆದರಿಸಿ ಇಲ್ಲವೆ ಹಲ್ಲೆ ಮಾಡಿ ಹಣ-ಆಭರಣಗಳ ಜೊತೆಗೆ ಮೊಬೈಲ್ ಸೆಟ್‌ಗಳನ್ನೂ ಸಹ ಕಸಿದುಕೊಂಡು ಹೋಗುತ್ತಾರೆ.
ದುರಂತವೆಂದರೆ ದರೋಡೆಗೆ ಒಳಗಾದ ಅಥವಾ ಮೊಬೈಲ್ ಕಳೆದುಕೊಂಡ ಬಹುತೇಕ ಮಂದಿ ಪೊಲೀಸರಿಗೆ ದೂರು ನೀಡುವುದಿಲ್ಲ. ಹೋದರೆ ಹೋಗಲಿ ಹೊಸದೊಂದು ಸೆಟ್ ತೆಗೆದುಕೊಳ್ಳುವ ಎಂದು ನಿರ್ಧರಿಸುತ್ತಾರೆ. ಇದು ಮಹಾ ತಪ್ಪು. ದರೋಡೆಕೋರ ಅಥವಾ ಕಳ್ಳ ನಿಮ ಮೊಬೈಲ್‌ಅನ್ನು ಕಡಿಮೆ ಬೆಲೆಗೆ ಉಗ್ರಗಾಮಿಗಳಿಗೋ ಅಥವಾ ಸಮಾಜಘಾತುಕರಿಗೋ ಅಥವಾ ಅಪರಾಧದ ಹಿನ್ನೆಲೆಯುಳ್ಳ ಕ್ರಿಮಿನಲ್‌ಗಳಿಗೋ ಮಾರಾಟ ಮಾಡಿದರೆ ಏನು ಮಾಡುತ್ತೀರಿ..? ಕ್ರಿಮಿನಲ್‌ಗಳು ನಿಮ ನಂಬರ್ ಅಥವಾ ಮೊಬೈಲ್ ಸೆಟ್ ಬಳಸಿ ಘೋರ ಅಪರಾಧ ಕೃತ್ಯವೆಸಗಿದರೆ ತಕ್ಷಣವೇ ಪೊಲೀಸರು ನಿಮ ಮನೆ ಬಾಗಿಲು ತಟ್ಟುತ್ತಾರೆ. ಆಗ ಮಾಡದೆ ಇರುವ ತಪ್ಪಿಗೆ ಅಲೆದಾಡಬೇಕಾಗುತ್ತದೆ. ಮಿತಿಮೀರಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಚ್ಚರ..!
ಒಂದು ವೇಳೆ ನಿಮ ಮೊಬೈಲ್ ಸೆಟ್ ಕಳೆದುಹೋದರೆ ಅಥವಾ ಕಳುವಾದರೆ ಅಥವಾ ದರೋಡೆಯಾದರೆ ಮೊದಲು ಸಂಬಂಧಿಸಿದ ಟೆಲಿಕಾಂ ಸಂಸ್ಥೆಯನ್ನು ಸಂಪರ್ಕಿಸಿ ನಿಮ ಮೊಬೈಲ್ ನಂಬರ್‌ನ ಸಂಪರ್ಕವನ್ನು ಸ್ಥಗಿತಗೊಳಿಸಿ ನಂತರ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ.
ಉದಾಸೀನ ಮಾಡಬೇಡಿ ಜೋಕೆ.!
ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಇ-ಪೋರ್ಟಲ್ (CEIR Portal) ನಲ್ಲಿ ದೂರು ದಾಖಲಿಸಿ ಮನೆಯಲ್ಲೇ ಕುಳಿತು ಪೋರ್ಟಲ್‌ನಲ್ಲಿ ಸುಲಭವಾಗಿ ಸಂಪರ್ಕಿಸಬಹುದು ಅಥವಾ ಇ-ಲಾಸ್ಟ್‌ನಲ್ಲಿ ತಿಳಿಸಿ ಯಾವುದೇ ಸಂದರ್ಭವಾದರೂ ಸರಿಯೇ ದೂರು ದಾಖಲಿಸುವುದನ್ನು ಮಾತ್ರ ಮರೆಯಬೇಡಿ. ಉದಾಸೀನ ಮಾಡಿದರೆ ಸಂಕಷ್ಟಕ್ಕೆ ಒಳಗಾಗುತ್ತೀರಿ ಜೋಕೆ..!
ಹೆಚ್ಚಿನ ಸಂಖ್ಯೆಯಲ್ಲಿ
ಮೊಬೈಲ್ ಕಳ್ಳರು, ದರೋಡೆಕೋರ ರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಬೆಂಗಳೂರು ನಗರ ಪೊಲೀಸರು ವಿಫಲರಾಗಿದ್ದಾರೆ. ಇದು ಪೊಲೀಸರ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ.