ಚಿಕ್ಕಮಗಳೂರು,ಅ.20- ಮಂಜು ಮುಸುಕಿದ ವಾತಾವರಣ, ತಣ್ಣಗೆ ಬೀಸುತ್ತಿರುವ ಗಾಳಿಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಂದು ಬೆಟ್ಟವೇರಿ ದೇವಿರಮನ ದರ್ಶನ ಪಡೆದು ಪುನೀತರಾದರು.
ನಿನ್ನೆ ಸುಮಾರು 40 ಸಾವಿರ ಜನ ಭಕ್ತರು ದರ್ಶನ ಪಡೆದಿದ್ದರು. ಇಂದು ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ವಾಹನಗಳಲ್ಲಿ ಆಗಮಿಸುವ ಭಕ್ತರಿಗೆ ಪೊಲೀಸರು ಅಡ್ಡ ಹಾಕಿ ತಮ ವಾಹನಗಳನ್ನು ನಗರದಲ್ಲಿಯೇ ಪಾರ್ಕಿಂಗ್ ಮಾಡಿ ಸರ್ಕಾರಿ ಬಸ್ಸಿನಲ್ಲಿ ಮಲ್ಲೇನಹಳ್ಳಿಗೆ ಪ್ರಯಾಣಿಸಲು ಸೂಚಿಸುತ್ತಿದ್ದರು. ಬೈಕ್ನಲ್ಲಿ ಬರುವಂತಹ ಭಕ್ತರಿಗೆ ಮಲ್ಲೇನಹಳ್ಳಿಗೆ ಬಿಡಲಾಗುತ್ತಿತ್ತು.
ನಗರದ ಐಡಿಎಸ್ಜಿ ಕಾಲೇಜ್ ಆವರಣ ಹಾಗೂ ಡಿ ಎ ಸಿ ಜಿ ಪಾಲಿಟೆಕ್ನಿಕ್ ಆವರಣ ಹಾಗೂ ಎಂ ಜಿ ರಸ್ತೆ, ಇಂದಿರಾಗಾಂಧಿ ರಸ್ತೆ, ರತ್ನಗಿರಿ ರಸ್ತೆ, ರಾಮನಹಳ್ಳಿ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ತಮ ವಾಹನಗಳನ್ನು ಭಕ್ತರು ಪಾರ್ಕಿಂಗ್ ಮಾಡಿ ಸರ್ಕಾರಿ ಬಸ್ ಹತ್ತಿ ಮಲ್ಲೇನಹಳ್ಳಿಗೆ ತಲುಪಿದರು ಭಕ್ತರಿಗೆ ನೂಕು ನುಗ್ಗಲು ಆಗದಂತೆ ಜಿಲ್ಲಾ ಪೊಲೀಸ್ ಮುಖ್ಯ ಅಧಿಕಾರಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಪೊಲೀಸ್ ತಂಡ ಅವಿರತವಾಗಿ ಶ್ರಮಿಸಿದೆ.
ರಾತ್ರಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಬೆಟ್ಟ ಹತ್ತಲು ಭಕ್ತರಿಗೆ ಕಠಿಣವಾಗುತ್ತಿದ್ದು ಸಂದರ್ಭದಲ್ಲಿ ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ನಿಂತು ಸ್ನೇಹಮಯ ವಾತಾವರಣದಲ್ಲಿ ಸಹಕರಿಸಿದ್ದು ಗಮನ ಸೆಳೆಯಿತು. ಬೆಟ್ಟದ ಮೇಲೆ ನೆಲೆಸಿರುವ ಶ್ರೀ ದೇವರಮನ ಸನ್ನಿಧಿಯಲ್ಲಿ ಇಂದು ವಿಶೇಷ ಪೂಜೆ , ನೆರವೇರಿತು ಬಂದ ಭಕ್ತರಿಗೆ ಹೂವು, ಕುಂಕುಮ ಪ್ರಸಾದ ವಿನಿಯೋಗ ಮಾಡಲಾಯಿತು.
ಇಂದು ಮಧ್ಯಾಹ್ನದವರೆಗೆ ಬೆಟ್ಟ ಹತ್ತಲು ಹಾಗೂ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು ನಾಳೆ ಬೆಳಿಗ್ಗೆ 8 ಗಂಟೆಗೆ ದೇವಾಲಯದಲ್ಲಿ ದೇವಿಗೆ ಉಡುಗೆ ಪೂಜೆ ನೆರವೇರಲಿದೆ ಸಂಜೆ 6.30ಕ್ಕೆ ಬಟ್ಟೆ ಬೆಣ್ಣೆ ಸುಡುವುದು ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗವಿದೆ.
ಅ.22ರಂದು ಬೆಳಿಗ್ಗೆ 8 ಗಂಟೆಗೆ ದೇವಿರಮನವರಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಗಳೊಂದಿಗೆ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ನೆರವೇರಲಿದೆ. ಅ. 23ರಂದು ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ ಹರಕೆ ಒಪ್ಪಿಸುವುದು ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ.