ಚಿಕ್ಕಮಗಳೂರು,ಅ.27- ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಹತ್ತು ಚಕ್ರದ ಟ್ಯಾಂಕರ್ ರಸ್ತೆ ಮಧ್ಯೆ ಅಡ್ಡಲಾಗಿ ನಿಂತ ಪರಿಣಾಮ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ವಾಹನ ಚಾರ್ಮಾಡಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಇದರಿಂದ ಎರಡು ಗಂಟೆಗೂ ಹೆಚ್ಚು ಕಾಲ ಘಾಟಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.
ಬಳಿಕ ಟ್ಯಾಂಕರನ್ನು ಬದಿಗೆ ಸರಿಸಿ ಒಂದೇ ಬದಿಯಲ್ಲಿ ಎರಡೂ ಕಡೆಯ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಯಿತು. ಇದರಿಂದ ಇಡೀ ದಿನ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬಸ್ಗಳು ಸರಿಯಾದ ಸಮಯಕ್ಕೆ ತಲುಪದೇ ಪ್ರಯಾಣಿಕರು ಪರದಾಡಿದರು ಎಂದು ಸ್ಥಳೀಯರು ತಿಳಿಸಿದರು.
ಚಾರ್ಮಾಡಿ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ, ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಟ್ಯಾಂಕರ್ನ್ನು ತಡೆಯದ ಕಾರಣ ಸಮಸ್ಯೆಯಾಗಿದೆ. ಘಾಟಿಯಲ್ಲಿ ಭಾರಿ ವಾಹನಗಳನ್ನು ಬಿಡಬಾರದು ಎಂದು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ವಾಹನ ಸವಾರ ಸುಬ್ರಮಣ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
