Friday, April 17, 2026
Homeರಾಜ್ಯಮಾರ್ಚ್‌-ಏಪ್ರಿಲ್‌ ವೇಳೆಗೆ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು ಡಿಸಿಎಂ ಸೂಚನೆ

ಮಾರ್ಚ್‌-ಏಪ್ರಿಲ್‌ ವೇಳೆಗೆ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು ಡಿಸಿಎಂ ಸೂಚನೆ

DCM instructs to complete road repair work by March-April

ಬೆಂಗಳೂರು, ಫೆ.22- ನಗರದಲ್ಲಿ 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆಗಳ ದುರಸ್ತಿ ಕಾಮಗಾರಿ ನಡೆಯಲಿದ್ದು, ಎಲ್ಲವೂ ಮಾರ್ಚ್‌ ಅಥವಾ ಏಪ್ರಿಲ್‌ ಒಳಗೆ ಪೂರ್ಣಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಸುಮಾರು 5 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೆಂಗಳೂರಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮಳೆಗಾಲ ಶುರುವಾಗುವ ಮುನ್ನಾ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬೆಂಗಳೂರಿನಿಂದ 40 ಕಿ.ಮೀ. ಅಂತರದಲ್ಲಿ ತಲಾ 150 ಎಕ್ಕರೆಯಷ್ಟು ಎರಡು ಜಾಗಗಳನ್ನು ಖರೀದಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಎರಡು ಕಡೆ ಜಾಗಗಳನ್ನು ಗುರುತಿಸಿದ್ದೇವೆ. ಹೆಚ್ಚುವರಿ ಯಾಗಿ ಇನ್ನೂ ಎರಡು ಕಡೆ ಜಾಗಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಅರಣ್ಯ, ಬೆಟ್ಟಗುಡ್ಡ ಪ್ರದೇಶದ ಪಕ್ಕದಲ್ಲಿರುವ ದೊಡ್ಡ ಜಾಗವನ್ನು ಐದಾರು ರೈತರು ಅಥವಾ ಅದಕ್ಕಿಂತ ಹೆಚ್ಚಿನವರ ಸಹಮತದೊಂದಿಗೆ ಖರೀದಿಸಲು ಜಾಹೀರಾತು ನೀಡಲಾಗುವುದು ಎಂದರು.

ದೆಹಲಿಗೆ ತಾವು ಪದೇಪದೇ ಭೇಟಿ ನೀಡುವುದು ಹೊಸದಲ್ಲ. ಪಕ್ಷದ ವರಿಷ್ಠರು ಯಾವಾಗ ಬೇಕಾದರೂ ಕರೆಯಬಹುದು, ನಾನು ಹೋಗಬೇಕಾಗುತ್ತದೆ. ನಾನಲ್ಲದೆ ಇನ್ಯಾರು ಹೋಗಲು ಸಾಧ್ಯ ಎಂದರು.

ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಬೇಕಾಗುತ್ತದೆ. ನಗರ ಯೋಜನೆಗೆ ಸಂಬಂಧಪಟ್ಟಂತೆ ವಿವರ ಬಂದಿದೆ ಅದರ ಬಗ್ಗೆ ಚರ್ಚಿಸಲು ನಾಳೆ ಅಥವಾ ನಾಡಿದ್ದು ರಾಜ್ಯದ ಅಧಿಕಾರಿಗಳ ತಂಡವನ್ನು ದೆಹಲಿಗೆ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.
ಅಸ್ಸಾಂ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಸಂಸದೆ ಪ್ರಿಯಾಂಕ ಗಾಂಧಿ ಅವರೊಂದಿಗೆ ರಾಜ್ಯ ರಾಜಕಾರಣ ಸಂಬಂಧಪಟ್ಟಂತೆ ಚರ್ಚೆ ನಡೆಸಿಲ್ಲ. ಎಲ್ಲವನ್ನೂ ಹಾಗೇ ಬಹಿರಂಗವಾಗಿ ಚರ್ಚೆ ಮಾಡಲಾಗುವುದಿಲ್ಲ ಎಂದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡದಿರುವುದು ಖಂಡನೀಯ. ರಾಹುಲ್‌ ಗಾಂಧಿ ದೇಶದ ಹಿತಾಸಕ್ತಿಗೆ ಪೂರಕವಾದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಮುಕ್ತವಾದ ಚರ್ಚೆಗಳಾಗಬೇಕು. ಇತ್ತೀಚಿನ ಕೆಲ ನಿರ್ಧಾರಗಳಿಂದ ರೈತರು ಹಾಗೂ ಉದ್ಯಮಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ರಾಹುಲ್‌ ಗಾಂಧಿಯವರು ಅದನ್ನೇ ಹೇಳುತ್ತಿದ್ದಾರೆ. ಆದರೆ ಅವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದರು.

ದೆಹಲಿಯಲ್ಲಿ ನಡೆದ ಜಾಗತಿಕ ಎಐ ಶೃಂಗ ಸಭೆಯಲ್ಲಿ ಚೀನಾ ನಿರ್ಮಿತ ರೋಬೋಟ್‌ ನಾಯಿಯನ್ನು ಪ್ರದರ್ಶಿಸಿ ದೇಶದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದನ್ನು ವಿರೋಧಿಸಿ ಯುವ ಕಾಂಗ್ರೆಸ್‌‍ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅದನ್ನು ಟೀಕಿಸುವುದು ಕುಮಾರಸ್ವಾಮಿಯವರ ರಾಜಕೀಯ ಮಾರ್ಗ. ಅದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

ಮನರೇಗಾ ಯೋಜನೆಯನ್ನು ಬದಲಾವಣೆ ಮಾಡಿ ಹೊಸದಾಗಿ ವಿಬಿ ಜಿ ರಾಮ್‌ ಜಿ ರೂಪಿಸಿರುವುದರಿಂದ ದೇಶಾದ್ಯಂತ ಪ್ರತಿಭಟನೆಗಳಾಗುತ್ತಿವೆ. ರಾಜ್ಯದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆ, ಪಾದಯಾತ್ರೆಗಳಾಗಿವೆ. ಇನ್ನೂ ಕೆಲವು ಕಡೆ ಪಾದಯಾತ್ರೆಗಳು ನಡೆಯಬೇಕು. ನಾಳೆ ಚಿಕ್ಕಬಳ್ಳಾಪುರದಲ್ಲಿ ಬೃಹತ್‌ ಪ್ರತಿಭಟನೆ ನಡೆಯುತ್ತಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಭಾಗವಹಿಸುತ್ತಾರೆ. ಪಕ್ಷದ ಎಲ್ಲಾ ಶಾಸಕರು ಭಾಗವಹಿಸಬೇಕು ಎಂದು ಕರೆ ನೀಡಿದರು.

ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮತ್ತು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊರಟಗೆರೆ ಕ್ಷೇತ್ರಕ್ಕೆ ಕೈಗಾರಿಕೆ ಮಂಜೂರು ಮಾಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿರಬಹುದು. ಅದಕ್ಕಾಗಿ ಪರಮೇಶ್ವರ್‌ ಭೇಟಿ ಮಾಡಿರಬಹುದು ಎಂದರು.

RELATED ARTICLES

Latest News