Homeರಾಷ್ಟ್ರೀಯಸಂಪುಟ ವಿಸ್ತರಣೆ ವಿಳಂಬವಾದರೆ ಬೇರೆ ರೀತಿಯ ಬೆಳವಣಿಗೆಗಳಾಗುವ ಆತಂಕವಿದೆ : ಡಿಸಿಎಂ ಪರಮೇಶ್ವರ್‌

ಸಂಪುಟ ವಿಸ್ತರಣೆ ವಿಳಂಬವಾದರೆ ಬೇರೆ ರೀತಿಯ ಬೆಳವಣಿಗೆಗಳಾಗುವ ಆತಂಕವಿದೆ : ಡಿಸಿಎಂ ಪರಮೇಶ್ವರ್‌

There is a fear that different developments will occur if the cabinet expansion is delayed

ಬೆಂಗಳೂರು, ಜು.29- ಹೈಕಮಾಂಡ್‌ ಸಂಭವನೀಯ ಸಚಿವರ ಪಟ್ಟಿಗೆ ಅನುಮತಿ ನೀಡಿದ್ದೇ ಆದರೆ ವಿಳಂಬವಾಗದಂತೆ ಸಂಪುಟ ವಿಸ್ತರಣೆಯಾಗಬೇಕಿದೆ. ಇಲ್ಲವಾದರೆ ಬೇರೆ ರೀತಿಯ ಬೆಳವಣಿಗೆಗಳಾಗುವ ಆತಂಕ ಇದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಬಗ್ಗೆ ತಮಗೆ ಮಾಹಿತಿ ಇಲ್ಲ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಿರುವುದಾಗಿ ತಿಳಿಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯಲ್ಲಿಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್‌, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸಭೆ ನಡೆಸಿ ತುರ್ತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಂಭವನೀಯ ಸಚಿವರ ಪಟ್ಟಿಗೆ ವರಿಷ್ಠರು ಅನುಮತಿ ನೀಡಿದರೆ, ಇಂದು ಅಥವಾ ನಾಳೆಯೊಳಗೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು.

ಸಮನ್ವಯತೆ ಅಥವಾ ಹೊಂದಾಣಿಕೆಯ ಕೊರತೆಯಿಂದ ವಿಳಂಬವಾಗುತ್ತಿಲ್ಲ, ರಾಹುಲ್‌ ಗಾಂಧಿ ವಿದೇಶ ಪ್ರದೇಶದಲ್ಲಿದ್ದರು. ವಾಪಾಸ್‌‍ ಬಂದಿದ್ದಾರೆ. ಅದರಿಂದ ತಡವಾಗಿದೆ ಎಂದರು. ಕಾವೇರಿ ನದಿ ನೀರಿನ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಪ್ರತಿ ಬಾರಿಯೂ ಇದೇ ಸಮಸ್ಯೆ ಕಾಡುತ್ತಿದೆ. ನೀರು ಲಭ್ಯವಿದ್ದಾಗ ಅವರು ಕೇಳದೇ ಇದ್ದರೂ ನಾವು ನೀರು ಹರಿಸುತ್ತೇವೆ. ಈಗ ನಮಗೆ ಕುಡಿಯಲಿಕ್ಕೆ ನೀರಿಲ್ಲ ಎನ್ನುವಾಗ, ತಮಿಳುನಾಡಿಗೆ 3.5 ಕ್ಯೂಸೆಕ್ಸ್ ಹರಿಸಬೇಕು ಎಂದು ಸಿಡಬ್ಲ್ಯೂಆರ್‌ಸಿ ಆದೇಶ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇದೇ ಆಗಸ್ಟ್‌ 3ರಂದು ತಮಿಳುನಾಡು ಮುಖ್ಯಮಂತ್ರಿಯವರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಅವರ ಜೊತೆ ಕೂಡ ಈ ನಿಟ್ಟಿನಲ್ಲಿ ಚರ್ಚೆ ಮಾಡುತ್ತೇವೆ ಎಂದರು.ದೆಹಲಿಯಲ್ಲಿ ಸಂಸದರ ಸಭೆಗೂ ಮುನ್ನ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದೇವೆ. ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.ಜಲಾಶಯಗಳಲ್ಲಿ ನೀರಿನ ಲಭ್ಯತೆ ಇಲ್ಲದೇ ಇರುವುದರಿಂದ ಸಹಜವಾಗಿಯೇ ಆತಂಕವಿದೆ. ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡಿನ ಮುಖ್ಯಮಂತ್ರಿಯವರು, ಪ್ರಧಾನಿಯವರಿಗೆ ಪತ್ರ ಬರೆಯುವುದಕ್ಕೆ ನಮಗೆ ಆಕ್ಷೇಪವಿಲ್ಲ. ಆದರೆ ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ. ಪ್ರಧಾನಿಯವರು ನ್ಯಾಯಾಲಯಕ್ಕಿಂತಲೂ ಮೇಲಿರುವುದಿಲ್ಲ ಎಂದರು.

ನ್ಯಾಯಾಲಯ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿ ನಿಗದಿತ ಪ್ರಮಾಣದಲ್ಲಿ ನೀರು ಹರಿಸಿದರೆ ಸಾಕಲ್ಲವೇ? ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ಏಕೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಹಾಗಾಗಿ ತಮಿಳುನಾಡಿನ ತಕರಾರು ಊರ್ಜಿತವಾಗುವುದಿಲ್ಲ ಎಂದರು.ತಮಿಳುನಾಡಿನ ಮುಖ್ಯಮಂತ್ರಿಯವರು ಕರ್ನಾಟಕಕ್ಕೆ ಬರುತ್ತಿರುವ ಬಗ್ಗೆ ಬಿಜೆಪಿಯವರು ವಿರೋಧ ವ್ಯಕ್ತ ಪಡಿಸುತ್ತಿರುವುದು ಸರಿಯಲ್ಲ, ಎರಡು ರಾಜ್ಯಗಳ ನಡುವೆ ಹಲವು ಸಮಸ್ಯೆಗಳಿರುತ್ತವೆ. ಚರ್ಚೆ ಮೂಲಕ ಬಗೆ ಹರಿಸಿಕೊಳ್ಳುವುದು ಸೂಕ್ತವಲ್ಲವೇ? ಬಿಜೆಪಿಯವರ ತಕರಾರು ಏನು? ನೆರೆ ರಾಜ್ಯಗಳು ಹೊಂದಾಣಿಕೆಯಲ್ಲಿರಬಾರದೇ? ಜಗಳವಾಡಿಕೊಂಡೇ ಇರಬೇಕೇ? ಎಂದು ಪ್ರಶ್ನಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ತಕರಾರಿಗೆ ಸಂಬಂಧಪಟ್ಟಂತೆ ಇತ್ತೀಚೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ನಡೆಸಿ ಚರ್ಚೆ ನಡೆಸಿದ್ದರು. ಇಂತಹ ಬೆಳವಣಿಗೆ ಒಳ್ಳೆಯದಲ್ಲವೇ?
ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೆಲ ನಿಯಮಗಳನ್ನು ಸಡಿಲಿಕೆ ಮಾಡಿ ಮುಂಗಡ ಪರಿಹಾರ ಪಾವತಿಸಿ ಎಂದು ಮನವಿ ಮಾಡಿಕೊಂಡಿದ್ದೇವೆೆ. ಈಗಿರುವ ಮಾನದಂಡಗಳಲ್ಲಿ ಶೇ.80ರಷ್ಟು ಮಳೆ ಕೊರತೆಯಿರುವ ಪ್ರದೇಶಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಆಗಸ್ಟ್‌ ತಿಂಗಳಿನಲ್ಲಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದನ್ನು ನೋಡಿಕೊಂಡು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಲಿದೆ. ಅನಂತರ ಸೆಪ್ಟೆಂಬರ್‌ನಲ್ಲಿ ಕೇಂದ್ರದಿಂದ ಅಧ್ಯಯನ ತಂಡ ಬಂದು ಪರಿಶೀಲಿಸಲಿದೆ. ಅನಂತರ ನಮ ಪ್ರಸ್ತಾವನೆಯನ್ನು ಆಧರಿಸಿ, ಎಷ್ಟು ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರ ತೀರ್ಮಾನಿಸುತ್ತದೆ ಎಂದರು.

RELATED ARTICLES

Latest News