Homeರಾಷ್ಟ್ರೀಯಪರಮಾಣು ಸೌಲಭ್ಯಗಳ ಮೇಲಿನ ದಾಳಿಗೆ ಬ್ರಿಕ್ಸ್ ಕಳವಳ

ಪರಮಾಣು ಸೌಲಭ್ಯಗಳ ಮೇಲಿನ ದಾಳಿಗೆ ಬ್ರಿಕ್ಸ್ ಕಳವಳ

ನವದೆಹಲಿ, ಸೆ. 13 (ಪಿಟಿಐ): ನಾಗರಿಕ ಮೂಲಸೌಕರ್ಯಗಳು ಮತ್ತು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ಸಂಪೂರ್ಣ ಸುರಕ್ಷತಾ ಕ್ರಮಗಳ ವ್ಯಾಪ್ತಿಯಲ್ಲಿರುವ ಶಾಂತಿಯುತ ಪರಮಾಣು ಸೌಲಭ್ಯಗಳ ಮೇಲಿನ ಉದ್ದೇಶಪೂರ್ವಕ ದಾಳಿಗಳ ಬಗ್ಗೆ ಬ್ರಿಕ್ಸ್‌ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಶಸ್ತ್ರ ಸಂಘರ್ಷದ ಸಂದರ್ಭಗಳಲ್ಲೂ ಪರಮಾಣು ಸುರಕ್ಷತೆ ಮತ್ತು ಭದ್ರತೆಯನ್ನು ಸದಾ ಎತ್ತಿಹಿಡಿಯಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಎರಡು ದಿನಗಳ ಬ್ರಿಕ್ಸ್‌ ಶೃಂಗಸಭೆಯ ಮೊದಲ ದಿನ ಅಂಗೀಕರಿಸಲಾದ ನವದೆಹಲಿ ಘೋಷಣೆಯಲ್ಲಿ, ಪರಮಾಣು ಅಪಾಯ ಮತ್ತು ಸಂಘರ್ಷದ ಸಾಧ್ಯತೆ ಹೆಚ್ಚುತ್ತಿರುವ ಬಗ್ಗೆಯೂ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯನ್‌, ಅಬುಧಾಬಿಯ ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಮತ್ತು ಒಕ್ಕೂಟದ ಇತರ ಉನ್ನತ ನಾಯಕರ ಸಮ್ಮುಖದಲ್ಲಿ, ಮೊದಲ ದಿನದ ಚರ್ಚೆಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆಯ ಅಂಗೀಕಾರವನ್ನು ಪ್ರಕಟಿಸಿದರು.

ಪಶ್ಚಿಮ ಏಷ್ಯಾದ ಸಂಘರ್ಷದ ಕುರಿತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಟೆಹ್ರಾನ್‌ ನಡುವಿನ ತೀವ್ರ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಬ್ರಿಕ್ಸ್‌ ರಾಷ್ಟ್ರಗಳು ಈ ಜಂಟಿ ಘೋಷಣೆಯ ಕುರಿತು ಒಮ್ಮತ ಸಾಧಿಸಿರುವುದು ಭಾರತಕ್ಕೆ ದೊರೆತ ಪ್ರಮುಖ ರಾಜತಾಂತ್ರಿಕ ಗೆಲುವಾಗಿದೆ. ಆದರೆ, ಇರಾನ್‌ ಮೇಲಿನ ಅಮೆರಿಕದ ದಾಳಿ ಅಥವಾ ಗಲ್ಫ್‌ ಅರಬ್‌ ರಾಷ್ಟ್ರಗಳ ಮೇಲೆ ಇರಾನ್‌ ಸೇನೆ ನಡೆಸಿದ ದಾಳಿಗಳ ಕುರಿತು ಘೋಷಣೆಯಲ್ಲಿ ನೇರವಾಗಿ ಉಲ್ಲೇಖಿಸಲಾಗಿಲ್ಲ.

ಯಾವುದೇ ದೇಶದ ಹೆಸರನ್ನು ಪ್ರಸ್ತಾಪಿಸದೆ, ‘ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಸಂಬಂಧಿತ ನಿರ್ಣಯಗಳನ್ನು ಉಲ್ಲಂಘಿಸಿ, ನಾಗರಿಕ ಮೂಲಸೌಕರ್ಯಗಳು ಹಾಗೂ ಐಎಇಎಯ ಸಂಪೂರ್ಣ ಸುರಕ್ಷತಾ ಕ್ರಮಗಳ ವ್ಯಾಪ್ತಿಯಲ್ಲಿರುವ ಶಾಂತಿಯುತ ಪರಮಾಣು ಸೌಲಭ್ಯಗಳ ಮೇಲೆ ನಡೆಸಲಾಗುವ ಉದ್ದೇಶಪೂರ್ವಕ ದಾಳಿಗಳ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ’ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.

ಜನರು ಮತ್ತು ಪರಿಸರವನ್ನು ಹಾನಿಯಿಂದ ರಕ್ಷಿಸಲು, ಸಶಸ್ತ್ರ ಸಂಘರ್ಷದ ಸಂದರ್ಭಗಳಲ್ಲೂ ಪರಮಾಣು ಸುರಕ್ಷತಾ ಕ್ರಮಗಳು ಮತ್ತು ಭದ್ರತೆಯನ್ನು ಸದಾ ಎತ್ತಿಹಿಡಿಯಬೇಕು ಎಂದು ಘೋಷಣೆಯಲ್ಲಿ ಹೇಳಲಾಗಿದೆ.ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್‌ ಒಕ್ಕೂಟವು 2024ರಲ್ಲಿ ಈಜಿಪ್ಟ್‌, ಇಥಿಯೋಪಿಯಾ, ಇರಾನ್‌, ಯುಎಇ ಮತ್ತು ಸೌದಿ ಅರೇಬಿಯಾವನ್ನು ಸೇರಿಸಿಕೊಳ್ಳುವ ಮೂಲಕ ವಿಸ್ತರಣೆಗೊಂಡಿತು. ಇಂಡೋನೇಷ್ಯಾ 2025ರಲ್ಲಿ ಒಕ್ಕೂಟಕ್ಕೆ ಸೇರ್ಪಡೆಯಾಯಿತು.

ಕಳೆದ ವರ್ಷ ಬೆಲಾರಸ್‌, ಬೊಲಿವಿಯಾ, ಕಝಾಕಿಸ್ತಾನ್‌, ಕ್ಯೂಬಾ, ಮಲೇಷ್ಯಾ, ನೈಜೀರಿಯಾ, ಥಾಯ್ಲೆಂಡ್‌, ಉಗಾಂಡಾ, ಉಜ್ಬೇಕಿಸ್ತಾನ್‌ ಮತ್ತು ವಿಯೆಟ್ನಾಂ ದೇಶಗಳು ಬ್ರಿಕ್ಸ್‌ನ ಪಾಲುದಾರ ರಾಷ್ಟ್ರಗಳಾದವು.

‘ಪರಮಾಣು ಅಪಾಯ ಮತ್ತು ಸಂಘರ್ಷದ ಸಾಧ್ಯತೆ ಹೆಚ್ಚುತ್ತಿರುವ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ. ಜಾಗತಿಕ ಸ್ಥಿರತೆ ಹಾಗೂ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಸಾಧಿಸಲು ನಿಶ್ಶಸ್ತ್ರೀಕರಣ, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಪ್ರಸರಣ ತಡೆ ವ್ಯವಸ್ಥೆಗೆ ಚೈತನ್ಯ ತುಂಬುವ ಜತೆಗೆ ಅದರ ಸಮಗ್ರತೆ ಮತ್ತು ಪರಿಣಾಮಕಾರಿತ್ವವನ್ನು ಕಾಪಾಡುವ ಅಗತ್ಯವನ್ನು ಪುನರುಚ್ಚರಿಸುತ್ತೇವೆ’ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ. ಪರಮಾಣು ಅಸ್ತ್ರಗಳ ಪ್ರಸರಣ ತಡೆ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪರಮಾಣು ಅಸ್ತ್ರಮುಕ್ತ ವಲಯಗಳು ನೀಡುವ ಮಹತ್ವದ ಕೊಡುಗೆಯನ್ನೂ ನಾಯಕರು ಒತ್ತಿ ಹೇಳಿದ್ದಾರೆ.

RELATED ARTICLES
spot_img

Latest News