ಕಾನ್ಪುರ, ಸೆ. 12 (ಪಿಟಿಐ): ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸಲು ಹಾಗೂ ಚುನಾಯಿತ ಪ್ರತಿನಿಧಿಗಳು ಮತ್ತು ಸಂಘಟನಾ ಪದಾಧಿಕಾರಿಗಳೊಂದಿಗೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಇಲ್ಲಿಗೆ ಆಗಮಿಸಿದರು.
ಸಂತೋಷ್ ಅವರು ಸಂಜೆ ಸಿವಿಲ್ ಲೈನ್ಸ್‌ನಲ್ಲಿರುವ ಹೋಟೆಲ್‌ಗೆ ಆಗಮಿಸಿ, ಕಾನ್ಪುರ-ಬುಂದೇಲ್‌ಖಂಡ ಪ್ರದೇಶದ ಎಂಟು ಜಿಲ್ಲೆಗಳ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿಗಳೊಂದಿಗೆ ಸಭೆ ನಡೆಸಿದರು. ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಸಭೆಗಳು ಸಂಘಟನಾತ್ಮಕ ಬಲವರ್ಧನೆ ಮತ್ತು ಬೂತ್ ಮಟ್ಟದ ಸಿದ್ಧತೆಗಳ ಮೇಲೆ ಕೇಂದ್ರೀಕರಿಸಲಿವೆ.
ಈ ವೇಳೆ ಸಂತೋಷ್ ಅವರು ಮಂಡಲ, ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 2027ರ ಚುನಾವಣಾ ಸಿದ್ಧತೆಗಳು ಹಾಗೂ ಪಕ್ಷದ ಸಂಘಟನಾತ್ಮಕ ಮತ್ತು ಆಡಳಿತಾತ್ಮಕ ಅಭಿಯಾನಗಳ ಕುರಿತು ಚರ್ಚಿಸಲು ಲಖನೌನಲ್ಲಿ ಬಿಜೆಪಿ ಉತ್ತರ ಪ್ರದೇಶದ ಕೋರ್ ಗ್ರೂಪ್ ಸಭೆ ಸೇರಿದ ಮರುದಿನವೇ ಈ ಭೇಟಿ ನಡೆದಿದೆ. ಈ ಸಭೆಯಲ್ಲಿ ಸಂತೋಷ್, ಉತ್ತರ ಪ್ರದೇಶ ಉಸ್ತುವಾರಿ ವಿನೋದ್ ತಾವ್ಡೆ, ಸಹ ಉಸ್ತುವಾರಿ ಜಗದೀಶ್ ಪಟೇಲ್, ರಾಜ್ಯಾಧ್ಯಕ್ಷ ಪಂಕಜ್ ಚೌಧರಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಭಾಗವಹಿಸಿದ್ದರು.
ಸಂತೋಷ್ ಅವರ ಸಭೆಗಳಿಗೂ ಮುನ್ನ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದೆ ಗೀತಾ ಶಾಕ್ಯ ಹಾಗೂ ಕಾನ್ಪುರ-ಬುಂದೇಲ್‌ಖಂಡ ಪ್ರದೇಶದ ಅಧ್ಯಕ್ಷ ರಾಮ್ ಕಿಶೋರ್ ಸಾಹು, ಈ ಪ್ರಕ್ರಿಯೆಯು ಸಂಘಟನೆಯನ್ನು ಬಲಪಡಿಸುವ ಹಾಗೂ ಚುನಾಯಿತ ಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರ ನಡುವಿನ ಸಮನ್ವಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ಚುನಾವಣಾ ಟಿಕೆಟ್ ನಿರ್ಧಾರಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದರು.
ಬಿಜೆಪಿ ಒಗ್ಗಟ್ಟಿನ ಸಂಘಟನೆಯಾಗಿ ಪಕ್ಷದ ಸಮೀಕ್ಷೆಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸಲಿದೆ. ಅದರ ಪ್ರಚಾರವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ (ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ) ತತ್ವದ ಮೇಲೆ ಕೇಂದ್ರೀಕೃತವಾಗಿರಲಿದೆ ಎಂದು ಶಾಕ್ಯ ಹೇಳಿದರು.
ಪಕ್ಷವು ಸೆಪ್ಟೆಂಬರ್ 17ರಿಂದ (ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ) ಅಕ್ಟೋಬರ್ 17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಅಭಿಯಾನ–ಜನಸೇವೆಯೇ ಪ್ರಭುಸೇವೆ’ಯನ್ನು ಹಮ್ಮಿಕೊಳ್ಳಲಿದೆ. ಈ ಅಭಿಯಾನವು ಸೇವೆ, ಉತ್ತಮ ಆಡಳಿತ ಮತ್ತು ಅಂತ್ಯೋದಯದ ಮೇಲೆ ಗಮನಹರಿಸುವುದರ ಜೊತೆಗೆ ಮೋದಿಯವರ ಸಾರ್ವಜನಿಕ ಜೀವನ ಹಾಗೂ ದೀರ್ಘಕಾಲದ ಜನಸೇವೆಯನ್ನು ಎತ್ತಿ ತೋರಿಸಲಿದೆ.
