ವಾಷಿಂಗ್ಟನ್, ಸೆ. 13: ಜಗತ್ತನ್ನೇ ನಡುಗಿಸಿದ್ದ ಸೆಪ್ಟೆಂಬರ್ 11ರ ಅಮೆರಿಕದ ಮೇಲಿನ ಉಗ್ರ ದಾಳಿಗೆ 25 ವರ್ಷ ತುಂಬುತ್ತಿರುವ ಸಂದರ್ಭದಲ್ಲೇ, ಅಮೆರಿಕದ ಪ್ರಮುಖ ಗುಪ್ತಚರ ಸಂಸ್ಥೆ ಸಿಐಎ ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಈ ದಾಳಿಗೂ ಮುನ್ನವೇ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಭಾರತದ ಮೇಲೂ ದಾಳಿ ನಡೆಸಲು ಯೋಜಿಸಿದ್ದ ಎಂಬುದು ಇದರಿಂದ ತಿಳಿದುಬಂದಿದೆ.1998ರಲ್ಲಿ ಅಮೆರಿಕ ಅಧ್ಯಕ್ಷರಿಗೆ ಸಲ್ಲಿಸಲಾಗಿದ್ದ ‘ಬಿನ್ ಲಾಡೆನ್ ಭಯೋತ್ಪಾದಕ ಜಾಲ ಇನ್ನೂ ಬೆದರಿಕೆ’ ಎಂಬ ಶೀರ್ಷಿಕೆಯ ಗುಪ್ತಚರ ವರದಿಯಲ್ಲಿ ಭಾರತದ ಉಲ್ಲೇಖವಿದೆ.
ಭಾರತದ ಜತೆಗೆ ಪಾಕಿಸ್ತಾನ, ಸೌದಿ ಅರೇಬಿಯಾ, ಈಜಿಪ್ಟ್, ಕುವೈತ್, ಯೆಮೆನ್ ಹಾಗೂ ಉಗಾಂಡಾದ ಮೇಲೂ ದಾಳಿ ನಡೆಸಲು ಬಿನ್ ಲಾಡೆನ್ ಸಂಚು ರೂಪಿಸಿದ್ದ ಎಂಬುದು ವರದಿಯಲ್ಲಿದೆ.ಭಾರತವನ್ನು ಗುರಿಯಾಗಿಸುವ ಇಂಗಿತ ವ್ಯಕ್ತವಾಗಿದ್ದರೂ, ಭಾರತದ ಯಾವ ನಗರ ಅಥವಾ ನಿರ್ದಿಷ್ಟ ಸ್ಥಳವನ್ನು, ಯಾವಾಗ ಗುರಿಯಾಗಿಸಲು ಯೋಜಿಸಲಾಗಿತ್ತು ಎಂಬ ಕಾರ್ಯಾಚರಣೆಯ ವಿವರಗಳನ್ನು ವರದಿಯಲ್ಲಿ ಬಹಿರಂಗಪಡಿಸಲಾಗಿಲ್ಲ.
60 ದೇಶಗಳಲ್ಲಿ ಹರಡಿದ್ದ ಜಾಲ: ಅಮೆರಿಕ, ಯುರೋಪ್ ಮತ್ತು ಪೂರ್ವ ಏಷ್ಯಾದಲ್ಲಿ ಬಿನ್ ಲಾಡೆನ್ ಬಲವಾದ ಜಾಲವನ್ನು ಹೊಂದಿದ್ದ. ವಿಶ್ವದ ಸುಮಾರು 60 ದೇಶಗಳಲ್ಲಿ ತನ್ನ ಸಹಚರರು ಹಾಗೂ ಉಗ್ರ ಸಂಘಟನೆಗಳ ಮೂಲಕ ಏಕಕಾಲದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಾಮರ್ಥ್ಯ ಅಲ್ ಖೈದಾಗೆ ಇತ್ತು ಎಂದು ಸಿಐಎ ವಿಶ್ಲೇಷಿಸಿತ್ತು.
ಅಮೆರಿಕ ಅಧ್ಯಕ್ಷರಿಗೆ ನಿರಂತರ ಎಚ್ಚರಿಕೆ: 1998ರಿಂದ 2001ರವರೆಗೆ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ನಂತರ ಅಧಿಕಾರಕ್ಕೆ ಬಂದ ಜಾರ್ಜ್ ಡಬ್ಲ್ಯು. ಬುಷ್ ಅವರಿಗೆ ಸಂಭವನೀಯ ದಾಳಿಗಳ ಕುರಿತು ಸಿಐಎ ನಿರಂತರವಾಗಿ ಗುಪ್ತಚರ ಎಚ್ಚರಿಕೆಗಳನ್ನು ನೀಡುತ್ತಿತ್ತು ಎಂಬುದನ್ನು 70ಕ್ಕೂ ಹೆಚ್ಚು ದಾಖಲೆಗಳು ಸಾಬೀತುಪಡಿಸಿವೆ.
ಏನಿದು 9/11 ದಾಳಿ?: 2001ರ ಸೆಪ್ಟೆಂಬರ್ 11ರಂದು ಅಲ್ ಖೈದಾದ 19 ಉಗ್ರರು ಅಮೆರಿಕದ ನಾಲ್ಕು ವಿಮಾನಗಳನ್ನು ಅಪಹರಿಸಿದ್ದರು. ಅವುಗಳಲ್ಲಿ ಎರಡು ವಿಮಾನಗಳು ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳಿಗೆ ಅಪ್ಪಳಿಸಿ ಸುಮಾರು 3,000 ಜನರ ಸಾವಿಗೆ ಕಾರಣವಾದವು. ಮೂರನೇ ವಿಮಾನ ಪೆಂಟಗನ್‌ಗೆ ಅಪ್ಪಳಿಸಿದರೆ, ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾದ ಬಯಲಿನಲ್ಲಿ ಪತನಗೊಂಡಿತ್ತು.
ಭಾರತ ಮತ್ತು ಅಲ್ ಖೈದಾ ನಂಟು: 1990ರ ದಶಕದ ಉತ್ತರಾರ್ಧದಲ್ಲೇ ಅಲ್ ಖೈದಾ, ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಜತೆಗೆ ನಿಕಟ ಸಂಪರ್ಕ ಹೊಂದಿತ್ತು. ಭಾರತದ ಮೇಲೆ ನೇರ ದಾಳಿ ನಡೆಸಲು ಬಿನ್ ಲಾಡೆನ್ ಹೊಂಚು ಹಾಕುತ್ತಿದ್ದ ಎಂಬುದು ಈ ದಾಖಲೆಗಳಿಂದ ಸ್ಪಷ್ಟವಾಗಿದೆ.
