ಕಾನ್ಪುರ,ಫೆ.22- ಮದುವೆ ಮನೆಯಲ್ಲಿ ವಧುವಿನ ಸಾಕುನಾಯಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದು ಜಗಳ ಉಂಟಾಗಿ ಐವರಿಗೆ ಗಾಯವಾಗಿದ್ದು, ವಿವಾಹ ಸಮಾರಂಭವನ್ನೇ ರದ್ದು ಮಾಡಿದ ಘಟನೆ ಉತ್ತರಪ್ರದೇಶದ ಫತ್ಹೇಪುರ ಜಿಲ್ಲೆಯಲ್ಲಿ ನಡೆದಿದೆ.
ಮುಂಜಾನೆ ಖಾಗಾ ಪ್ರದೇಶದ ಅತಿಥಿಗೃಹದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಆಭರಣ ವ್ಯಾಪಾರಿ ಸುಮಿತ್ ಕೇಸರ್ವಾನಿ (25) ಪ್ರಯಾಗರಾಜ್‌ನ ತನು ಕೇಸರ್ವಾನಿ(19)ಅವರನ್ನು ಮದುವೆಯಾಗಬೇಕಿತ್ತು.
ವಿವಾಹದ ವಿಧಿವಿಧಾನಗಳು ನಡೆಯುತ್ತಿರುವಾಗ, ವಧುವಿನ ಸಾಕು ನಾಯಿಯನ್ನು ಆಕೆಯ ಕುಟುಂಬದವರು ಕರೆತಂದು ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಟ್ಟಿಹಾಕಿದ್ದರು. ನಾಯಿ ಇದರಿಂದ ಬೊಗಳಲು ಪ್ರಾರಂಭಿಸಿತು.
ವರನ ಕಡೆಯವರು ನಾಯಿಯ ಬೊಗಲಾಟ ಕೇಳಿ ಅದನ್ನು ಮೌನಗೊಳಿಸಲು ಯತ್ನದಲ್ಲಿ ಒಬ್ಬರು ಅದನ್ನು ಹೊಡೆದಿದ್ದಾರೆ. ಇದು ವಧುವಿನ ಕಡೆಯವರ ಕೋಪಕ್ಕೆ ಗುರಿಯಾಗಿ ತೀವ್ರವಾದ ವಾಗ್ವಾದಕ್ಕೆ ಕಾರಣವಾಯಿತು.
ವಾಗ್ವಾದಿಂದ ಉಂಟಾದ ಜಗಳ ದೈಹಿಕ ಹಲ್ಲೆಗೂ ಎಡೆ ಮಾಡಿಕೊಟ್ಟಿತು. ಕುರ್ಚಿಗಳು ಮತ್ತು ಕೋಲುಗಳನ್ನು ಬಳಸಿ ಗುದ್ದಾಡಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ವಧುವಿನ ಕುಟುಂಬದವರಾದ ರಿಷಭ್ ಕೇಸರ್ವಾನಿ, ಶುಭಂ ಗುಪ್ತಾ ಮತ್ತು ಸಂಗೀತಾ ದೇವಿ ಅವರ ತಲೆಗೆ ಗಾಯಗಳಾಗಿದ್ದು, ಮತ್ತೊಬ್ಬ ವ್ಯಕ್ತಿಯ ಕೈ ಮುರಿತವಾಗಿದೆ. ವರನ ಕಡೆಯ ಕೆಲವು ಸದಸ್ಯರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ ಎರಡೂ ಕಡೆಯವರನ್ನು ಖಾಗಾ ಠಾಣೆಗೆ ಕರೆದೊಯ್ದರಲ್ಲದೆ, ಗಾಯಾಳುಗಳಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಪೊಲೀಸರು ಕುಟುಂಬಗಳ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರಾದರೂ ವಧು ಮದುವೆಯಾಗಲು ನಿರಾಕರಿಸಿದ್ದರಿಂದ ನಂತರ ಎರಡೂ ಕಡೆಯವರು ಮದುವೆಯನ್ನು ರದ್ದುಗೊಳಿಸಲು ಮತ್ತು ಸಿದ್ಧತೆಗಳ ಸಮಯದಲ್ಲಿ ವಿನಿಮಯ ಮಾಡಿಕೊಂಡ ಉಡುಗೊರೆಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಒಪ್ಪಿಕೊಂಡಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಖಾಗಾ) ಆರ್ ಕೆ ಪಟೇಲ್ ತಿಳಿಸಿದ್ದಾರೆ.
ವಧು-ವರರ ಇಬ್ಬರೂ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದರು. ಕಾನ್ಪುರದ ಆರ್ಯ ಸಮಾಜ ದೇವಸ್ಥಾನದಲ್ಲಿ ತಮ ವಿವಾಹವನ್ನು ನೆರವೇರಿಸಿಕೊಂಡು ನ್ಯಾಯಾಲಯದ ವಿವಾಹ ನೋಂದಣಿ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದರು.
ಫೆಬ್ರವರಿ 18 ರಂದು ನಿಗದಿಯಾಗಿದ್ದ ಔಪಚಾರಿಕ ಸಮಾರಂಭವು ಸಾಮಾಜಿಕ ಆಚರಣೆಯಾಗಬೇಕಿತ್ತು, ಆದರೆ ಘರ್ಷಣೆಯ ನಂತರ ಹಠಾತ್ತನೆ ಕೊನೆಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
