ಬೆಂಗಳೂರು,ನ.4- ನೋಟು ಮುದ್ರಿಸುವ ರಿಸರ್ವ್ ಬ್ಯಾಂಕ್‌ಗೆ ವಂಚಿಸಿದ್ದ 10 ಮಂದಿಯ ಖತರ್ನಾಕ್ ಗ್ಯಾಂಗನ್ನು ಖೆಡ್ಡಾಗೆ ಬೀಳಿಸುವಲ್ಲಿ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದವರೇ ಹೆಚ್ಚಾಗಿರುವ ಈ ಗ್ಯಾಂಗ್‌ನ ಸದಸ್ಯರು ಸಾರ್ವಜನಿಕರಿಗೆ ಪೂಜೆ ನೆಪದಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳ ಮಳೆ ಸುರಿಸುವುದಾಗಿ ಹೇಳಿ ಅವರಿಂದ 2 ಸಾವಿರ ಮುಖಬೆಲೆಯ ನೋಟನ್ನು ಪಡೆದುಕೊಂಡಿದ್ದಾರೆ.
ಈ ಗ್ಯಾಂಗ್‌ನ ಸದಸ್ಯರು ಈ ಅಸಲಿ ನೋಟುಗಳನ್ನು ಬಳಸಿಕೊಂಡು ನೋಟಿನ ಕ್ರಮ ಸಂಖ್ಯೆ, ಸಿರೀಸ್ ಮತ್ತು ಮುದ್ರಿತ ವರ್ಷವನ್ನು ತಿದ್ದುಪಡಿ ಮಾಡಿ ಅದೇ ನೋಟುಗಳನ್ನು ಆರ್‌ಬಿಐಗೆ ಕೊಟ್ಟು ಹಣವನ್ನು ಬದಲಾಯಿಸಿಕೊಂಡಿದ್ದಾರೆ.ತದ ನಂತರದಲ್ಲಿ ಈ ನೋಟುಗಳ ಕ್ರಮ ಸಂಖ್ಯೆ, ಸಿರೀಸ್‌ಗಳ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ಆರ್‌ಬಿಐ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದರು.ದೂರಿನಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ 2 ಸಾವಿರ ಮುಖಬೆಲೆಯ ನೋಟುಗಳ ಸಿರೀಸ್ ಹಾಗೂ ಕ್ರಮಸಂಖ್ಯೆಗಳನ್ನು ತಿದ್ದಿ, ಆರ್‌ಬಿಐಗೆ ಜಮಾ ಮಾಡಿ ವಂಚಿಸಿದ್ದಾರೆಂದು ತಿಳಿಸಲಾಗಿತ್ತು.
ದೂರಿನ ಆಧಾರದ ಮೇರೆಗೆ ಅಖಾಡಕ್ಕಿಳಿದ ಹಲಸೂರು ಗೇಟ್ ಪೊಲೀಸರು 10 ಮಂದಿಯ ಖತರ್ನಾಕ್ ಗ್ಯಾಂಗ್ ಅನ್ನು ಖೆಡ್ಡಾಗೆ ಬೀಳಿಸಿಕೊಂಡು ವಿಚಾರಣೆಗೆ ಒಳಪಡಿಸಿ 18 ಲಕ್ಷ ಮೌಲ್ಯದ 2 ಸಾವಿರ ಮುಖ ಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು, ರಿಸರ್ವ್ ಬ್ಯಾಂಕ್ ಆ್ ಇಂಡಿಯಾಗೆ ಹಣ ಪಾವತಿ ಮಾಡಿದ್ದ ವ್ಯಕ್ತಿಯನ್ನು ಕಬ್ಬನ್‌ಪೇಟೆಯ ಆತನ ನಿವಾಸದಲ್ಲಿ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ 40 ಸಾವಿರ ಮೌಲ್ಯದ 2 ಸಾವಿರ ನೋಟುಗಳ ಕ್ರಮ ಸಂಖ್ಯೆ, ಸಿರೀಸ್ ಬದಲಿಸಿ ಆರ್‌ಬಿಐಗೆ ನೀಡಿರುವುದರ ಬಗ್ಗೆ ಬಾಯಿಬಿಟ್ಟಿದ್ದ.
ಆ ಹಣವನ್ನು ಕಮಿಷನ್ ಆಸೆಗಾಗಿ ಪರಿಚಯವಿದ್ದ ಇಬ್ಬರು ವ್ಯಕ್ತಿಗಳಿಂದ ಹಣವನ್ನು ಪಡೆದಿರುವುದಾಗಿ ತಿಳಿಸಿದ್ದ. ಆತನ ಮಾಹಿತಿ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಅದೇ ದಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಈ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 6 ದಿನಗಳ ಪೊಲೀಸ್ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಗಳಿಗೆ ಪರಿಚಯವಿದ್ದು ಅವರಿಗೆ ಎರಡು ಸಾವಿರ ಮುಖಬೆಲೆಯ 8 ಲಕ್ಷ ರೂ.ಗಳನ್ನು ನೀಡಿದ್ದ ಮೂವರು ವ್ಯಕ್ತಿಗಳನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿತ್ತು.
ಅವರನ್ನು ವಿಚಾರಣೆಗೊಳಪಡಿಸಿದಾಗ ಅವರು ಸಾರ್ವಜನಿಕರಿಗೆ ಪೂಜೆ ಮಾಡಿಸುವ ನೆಪದಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ ನಿರಂತರ ಕ್ರಮಸಂಖ್ಯೆಯ 2018 ರಲ್ಲಿ ಮುದ್ರಿತವಾಗಿರುವ ವಿವಿಧ ಸಿರೀಸ್‌ಗಳನ್ನು ಹೊರತು ಪಡಿಸಿ, ಇತರ 2ಸಾವಿರ ಮುಖ ಬೆಲೆಯ ನೋಟುಗಳನ್ನು ನೀಡಿದ್ದಲ್ಲಿ ಅವುಗಳಿಗೆ ನೂರು ಪಟ್ಟು ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಅವರಿಂದ 2 ಸಾವಿರ ಮುಖ ಬೆಲೆಯ ನೋಟುಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು.
ಈ ಮೂವರು ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 9 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಗಿದೆ. ಇದೇ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಇತರೆ ಮೂವರು ವ್ಯಕ್ತಿಗಳನ್ನು ಆಂಧ್ರಪ್ರದೇಶದ ವಿವಿಧ ಸ್ಥಳಗಳಿಂದ ವಶಕ್ಕೆ ಪಡೆದುಕೊಂಡು ಅವರಿಂದ 6 ಲಕ್ಷ ಮೌಲ್ಯದ 2 ಸಾವಿರ ಮುಖ ಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಬಂಧಿತ ಆರೋಪಿಗಳು ನೋಟಿನ ಮೇಲಿರುವ ಕ್ರಮ ಸಂಖ್ಯೆ, ಸಿರೀಸ್ ಮತ್ತು ಮುದ್ರಿತ ವರ್ಷವನ್ನು ಇವರುಗಳ ಬೇಡಿಕೆಯಂತೆ ತಿದ್ದುಪಡಿ ಪಡಿಸುತ್ತಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದು ಆತನನ್ನು ಯಶವಂತಪುರದಲ್ಲಿ ಬಂಧಿಸಿ ಆತನಿಂದಲೂ 6 ಲಕ್ಷ ಮೌಲ್ಯದ ನೋಟುಗಳು ಹಾಗೂ ನೋಟಿನ ಕ್ರಮ ಸಂಖ್ಯೆ, ಸಿರೀಸ್ ಮತ್ತು ಮುದ್ರಿತ ವರ್ಷವನ್ನು ತಿದ್ದಲು ಉಪಯೋಗಿಸಿದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಟ್ಟಾರೆ ಈ ಪ್ರಕರಣದಲ್ಲಿ ಎರಡು ಸಾವಿರ ಮುಖ ಬೆಲೆಯ 18 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.10 ಮಂದಿ ಆರೋಪಿಗಳನ್ನು ನ್ಯಾಯಾಲಯ ಬಂಧನಕ್ಕೆ ಒಳಪಡಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಗ್ಯಾಂಗ್‌ನ ಕಿಂಗ್‌ಪಿನ್ ಮಹಿಳೆಯ ಬಂಧನಕ್ಕೆ ಜಾಲ ಬೀಸಲಾಗಿದೆ.
ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ.ಹಾಕೆ ಮಾರ್ಗದರ್ಶನದಲ್ಲಿ ಹಲಸೂರುಗೇಟ್ ಎಸಿಪಿ ಶಿವಾನಂದ ಚಲವಾದಿ ನೇತೃತ್ವದ ಪೊಲೀಸ್ ತಂಡ ಆರ್‌ಬಿಐಗೆ ವಂಚಿಸಿದ್ದ ಖತರ್ನಾಕ್ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಲಸೂರುಗೇಟ್ ಪೊಲೀಸ್ ಠಾಣೆಯ ಇನ್‌್ಸಪೆಕ್ಟರ್ ಅಶ್ವಥನಾರಾಯಣಸ್ವಾಮಿ ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಶ್ಲಾಘಿಸಿದ್ದಾರೆ.
