ಬೆಂಗಳೂರು, ಸೆ.28- ಕಾವೇರಿ ನದಿ ನೀರಿನ ಹಂಚಿಕೆ ವಿಷಯವಾಗಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‍ಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಹಿತಾಸಕ್ತಿ ವಿಷಯವಾಗಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅಧಿಕಾರ ಇದೆ. ಈ ಹಿನ್ನೆಲೆಯಲ್ಲಿ ನಾಳೆ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ಬಂದ್‍ಗೆ ಅನುಮತಿ ಇಲ್ಲ ಎಂದಿದ್ದಾರೆ.
ಮೊನ್ನೆ ಬೆಂಗಳೂರು ಬಂದ್ ನಡೆದಾಗ ಹೈಕೋರ್ಟ್ ರಾಜ್ಯಸರ್ಕಾರಕ್ಕೆ ಕಟ್ಟೆಚ್ಚರಿಕೆ ನೀಡಿದೆ. ಸುಪ್ರೀಂಕೋರ್ಟಿನ ತೀರ್ಪಿನ ಅನುಸಾರ ಪ್ರತಿಭಟನಾ ಮೆರವಣಿಗೆ ಹಾಗೂ ಬಂದ್‍ಗಳಿಗೆ ಅವಕಾಶ ಇಲ್ಲ. ಅಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಈ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕ ಬಂದ್‍ಗೆ ಅವಕಾಶ ಇಲ್ಲ. ಪೊಲೀಸರು ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ಅಗತ್ಯ ಇರುವ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ. ಬಲವಂತದ ಬಂದ್ ಮಾಡಲು ಮುಂದಾದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಬಂದ್ ಮಾಡುವುದಾಗಿ 20-30 ಸಂಘಟನೆಗಳು ಹೇಳಿಕೆ ನೀಡಿವೆ. ಕೆಲವರು ತೆರೆದ ವಾಹನದಲ್ಲಿ ಬಂದ್‍ಗೆ ಬೆಂಬಲ ಕೋರಿ ಪ್ರಚಾರ ಮಾಡುತ್ತಿದ್ದಾರೆ. ಪೊಲೀಸರು ಅಂತಹ ಸಂಘಟನೆಗಳಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಬಂದ್ ಮಾಡದಂತೆ ಸೂಚಿಸಿದ್ದಾರೆ ಎಂದರು.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕುಸಿತ ಕಂಡಿವೆ. ಕೃಷಿ ಆದಾಯ ಶೇ. 50 ರಷ್ಟು ಕಡಿಮೆಯಾಗಿದೆ. ಬರಪರಿಸ್ಥಿತಿಯಿಂದಾಗಿ 20 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರ ಎನ್‍ಡಿಆರ್‍ಎಸ್ ಅಡಿ ಅಲ್ಪಸ್ವಲ್ಪ ನೆರವು ನೀಡಬಹುದು. ಆದರೆ ಪೂರ್ಣ ಪ್ರಮಾಣದ ನಷ್ಟ ಭರಿಸಲು ಸಾಧ್ಯವಿಲ್ಲ. ಈ ಹಂತದಲ್ಲಿ ಪದೇಪದೇ ಬಂದ್‍ಗಳು ನಡೆಯುವುದರಿಂದ ಆರ್ಥಿಕ ನಷ್ಟವಾಗತ್ತದೆ. ಬೆಂಗಳೂರು ಬಂದ್ ದಿನ ಒಂದೂವರೆ ಸಾವಿರ ಕೋಟಿ ರೂ.ಗಳ ನಷ್ಟ ವಾಗಿದೆ. ಇಂದು ರಜೆ, ನಾಳೆ ಮತ್ತೆ ಬಂದ್ ನಡೆದರೆ ವ್ಯಾಪಾರೋದ್ಯಮಗಳು ಬಹಳ ನಷ್ಟ ಅನುಭವಿಸುತ್ತವೆ ಎಂದು ಹೇಳಿದರು.
ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆಟೋ ಚಾಲಕ ಸೇರಿ ಮೂವರ ಬಂಧನ
ಬಂದ್‍ಗಳು ನಡೆದಾಕ್ಷಣ ಏನೂ ಪ್ರಯೋಜನವಾಗುವುದಿಲ್ಲ. ಕಾವೇರಿ ನೀರು ನಿಯಂತ್ರಣಾ ಸಮಿತಿ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ತಮ್ಮ ಆದೇಶವನ್ನು ಬದಲಾವಣೆ ಮಾಡುವುದಿಲ್ಲ. ರಾಜ್ಯಸರ್ಕಾರ ತನ್ನ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ನ್ಯಾಯಾಲಯಗಳು ಹಾಗೂ ಸಮಿತಿಗಳ ಮುಂದೆ ಪ್ರಬಲ ವಾದ ಮಂಡಿಸಿದ್ದೇವೆ. ಅದರ ಜೊತೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರುವ ತಯಾರಿಗಲು ನಡೆದಿವೆ. ಇದರಲ್ಲಿ ಯಾವುದೇ ವೈಫಲ್ಯವಾಗಿಲ್ಲ ಎಂದರು.
ರಾಜಕೀಯಕ್ಕಾಗಿ ಹೊಸದಾಗಿ ಮದುವೆಯಾಗಿರುವ ಜೆಡಿಎಸ್, ಬಿಜೆಪಿ ಪಕ್ಷಗಳು ವಾಸ್ತವವನ್ನು ಮರೆಮಾಚಿ ಟೀಕೆ ಮಾಡುತ್ತಿವೆ. ನಾವು ಕಾವೇರಿ ವಿವಾದಲ್ಲಿ ಯಾವುದನ್ನೂ ಮುಚ್ಚಿಟ್ಟಿಲ್ಲ. ಎರಡು ಬಾರಿ ಸರ್ವ ಪಕ್ಷಗಳ ಸಭೆ ನಡೆಸಿದ್ದೇವೆ. ಪ್ರತಿ ಹಂತದಲ್ಲೂ ರಾಜ್ಯದ ಜನರಿಗೆ ಮಾಹಿತಿ ನೀಡುತ್ತಿದ್ದೇವೆ. ಈ ಹಿಂದೆ ಆ ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ನಾಡಿನ ಹಿತಾಸಕ್ತಿಗನುಗುಣವಾಗಿ ಕೆಲಸ ಮಾಡಿವೆ. ನಾವೂ ಕೂಡ ಅದೇ ರೀತಿಯೇ ಕೆಲಸ ಮಾಡುತ್ತಿದ್ದೇವೆ. ರಾಜಕೀಯಕ್ಕಾಗಿಯೇ ಟೀಕೆ ಮಾಡುವುದು ಸರಿಯಲ್ಲ ಮುಂದೆ ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ಆಗ ನಾವು ಟೀಕೆ ಮಾಡುತ್ತೇವೆ ಎಂದು ಹೇಳಿದರು.
ಕರ್ನಾಟಕ ಕಾಂಗ್ರೆಸ್‍ಗೆ ತಮಿಳುನಾಡಿನ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಇಲ್ಲ. ನಾಡಿನ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಎಲ್ಲಾ ಪಕ್ಷಗಳೂ ಬದ್ಧವಾಗಿವೆ. ಇದರಲ್ಲಿ ರಾಜಕಾರಣ ಬೆರೆಸುವುದು ಬೇಡ ಎಂದರು.
ಬಿಜೆಪಿ, ಜೆಡಿಎಸ್ ಮೈತ್ರಿಯ ಬಳಿಕ ಆ ಪಕ್ಷಗಳಲ್ಲಿ ಅಸಮಾಧಾನಗೊಂಡ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುವುದು ಹೆಚ್ಚಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಯಾರೂ ಸೈದ್ಧಾಂತಿಕ ರಾಜಕಾರಣ ಮಾಡುತ್ತಿಲ್ಲ. ಎಲ್ಲರೂ ಅನುಕೂಲ ಸಿಂಧು ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸೇರಿಸಿಕೊಳ್ಳುತ್ತೇವೆ. ನಮ್ಮ ತುಮಕೂರು ಜಿಲ್ಲೆಯಲ್ಲೂ ಅನೇಕ ಮಂದಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಹೇಳಿದರು.
ಲಾಲೂ ಭೇಟಿಯಾದ ರಾಜಾ, ಬಿಜೆಪಿ ಮಣಿಸಲು ಕಾರ್ಯತಂತ್ರ
ರಾಜಕಾರಣದಲ್ಲಿ ಪಕ್ಷಾಂತರ ಸಾಮಾನ್ಯವಾಗಿದೆ. ಸಿ.ಎಂ.ಇಬ್ರಾಹಿಂ ಸದ್ಯಕ್ಕೆ ಜೆಡಿಎಸ್‍ನ ರಾಜ್ಯಾಧ್ಯಕ್ಷರಾಗಿದ್ದಾರೆ. ಪ್ರಸ್ತುತ ಬೆಳವಣಿಗೆಯ ಬಗ್ಗೆ ಅವರು ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಜೆಡಿಎಸ್ ಬಿಡುತ್ತೇನೆ ಅಥವಾ ರಾಜ್ಯಾಧ್ಯಕ್ಷ ಹುದ್ದೆ ತೊರೆಯುತ್ತೇನೆ ಎಂದಾಗಲಿ ಹೇಳಿಲ್ಲ. ಹೀಗಾಗಿ ಅವರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.