ಬೆಂಗಳೂರು, ಡಿ.1- ಮುಂದಿನ ಐದು ವರ್ಷಗಳಲ್ಲಿ ದೇಶ ಮತ್ತು ರಾಜ್ಯವನ್ನು ಏಡ್ಸ್ ಮುಕ್ತಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್‍ಐವಿ ಮಾರಕ ಸಾಂಕ್ರಾಮಿಕ ರೋಗ. ಇದನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. 1981ರಲ್ಲಿ ಮೊದಲು ಇದು ಕಾಣಿಸಿಕೊಂಡಿತ್ತು. 1986 ಭಾರತದಲ್ಲಿ, 1996 ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಇತ್ತೀಚೆಗೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಸೋಂಕು ಹರಡುವುದು ಕಡಿಮೆಯಾಗಿದೆ. ಆದರೆ ಸೋಂಕನ್ನು ಶೂನ್ಯಕ್ಕೆ ತರುವ ಘೋಷಣೆ ಇನ್ನೂ ಸಾಧ್ಯವಾಗಿಲ್ಲ ಎಂದರು.
ಸೋಂಕಿನ ಪ್ರಮಾಣದಲ್ಲಿ ಜಗತ್ತಿನಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಅದಕ್ಕಾಗಿ ಹೆಚ್ಚು ಜಾಗೃತರಾಗಿರುವ ಅಗತ್ಯವಿದೆ. ಸೋಂಕು ಹರಡುವಿಕೆಯ ಬಗ್ಗೆ ತಪ್ಪು ಕಲ್ಪನೆಗಳಿವೆ. ಮಾತನಾಡುವುದರಿಂದ ಸೋಂಕು ಹರಡುವುದಿಲ್ಲ. ರಕ್ತ, ಲಾಲಾ ರಸದ ಮೂಲಕ ಹರಡುತ್ತದೆ. ಸೋಂಕು ತಗಲಿದ ಬಳಿಕ ಅನುಭವಿಸುವ ಬದಲು ಮುಂಜಾಗ್ರತೆ ಅಗತ್ಯ ಎಂದರು.
ಐದು ವರ್ಷದಲ್ಲಿ ಭಾರತ ಮತ್ತು ರಾಜ್ಯ ಏಡ್ಸ್ ಮುಕ್ತವಾಗಬೇಕು. ಇಂದಿನ ದಿನ ಆಚರಣೆಗೆ ನಾನು ಶುಭಾಷಯ ಕೋರುವುದಿಲ್ಲ, ರೋಗ ತೊಲಗಲಿ ಎಂದು ಆಶಿಸುತ್ತೇನೆ. ಹೆಚ್‍ಐವಿ ನಿಯಂತ್ರಣ ಕಾಯ್ದೆಯನ್ನು 2017ರಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿತ್ತು ಎಂದು ಸ್ಮರಿಸಿಕೊಂಡರು. ಏಡ್ಸ್ ರೋಗ ನಿಯಂತ್ರಣ ಅಭಿಯಾನದ ರಾಯಭಾರಿಯಾಗಿದ್ದ ನಟಿ ಸಂಜನಾ ಗಲ್ರಾನಿಯವರನ್ನು ಇದೇ ವೇಳೆ ಅಭಿನಂದಿಸಿದರು.
ಈ ವೇಳೆ ಸಂಜನಾ ಅವರನ್ನು ಶ್ರೀಮತಿ ಎಂದು ಸಂಬೋಸಿದ ಮುಖ್ಯಮಂತ್ರಿಯವರು, ಸಾರಿ , ಕುಮಾರಿ ಸಂಜನಾ.. ಶ್ರೀಮತಿ ಎಂದು ಬಿಟ್ಟೆ, ನನಗೆ ಗೊತ್ತಿರಲಿಲ್ಲ. ಶ್ರೀಮತಿನಾ ಎಂದು ಪ್ರಶ್ನಿಸಿದರು. ಸಂಜನಾ ತಾವು ಶ್ರೀಮತಿ ಎಂದು ಒಪ್ಪಿಕೊಂಡರು.
ಇದೇ ವೇಳೆ ಹೆಚ್‍ಐವಿ ಸೋಂಕನ್ನು ಜಯಿಸಿದ ತ್ಯಾಗರಾಜು ಅವರನ್ನು ಮುಖ್ಯಮಂತ್ರಿ ವೇದಿಕೆಯಲ್ಲಿ ಅಭಿನಂದಿಸಿದರು. ಸೋಂಕಿನೊಂದಿಗೆ ತ್ಯಾಗರಾಜ್ ಇಪ್ಪತ್ತಾರು ವರ್ಷ ಬದುಕಿದ್ದಾರೆ, ಅವರಿಗೀಗ ಅರವತ್ತಾರು ವರ್ಷ ಎಂದು ಭುಜ ತಟ್ಟಿದರು. ಇವರಿಂದ ಕಾರ್ಯಕ್ರಮದಲ್ಲಿ ಮಾತಮಾಡಿಸಿ, ಇತರರಿಗೂ ಮಾರ್ಗದರ್ಶನವಾಗಲಿ ಎಂದರು. ನಿಮ್ಮ ಶ್ರೀಮತಿಯವರಿಗೆ ಸೋಂಕು ಇದೆಯಾ? ಎಂದು ಮುಖ್ಯಮಂತ್ರಿ ಕೇಳಿ ತಿಳಿದುಕೊಂಡರು. ತಮ್ಮ ಪತ್ನಿಗೆ ಸೋಂಕು ಇದೆ, ನಮ್ಮ ಮಕ್ಕಳಿಗೆ ಇಲ್ಲ ಎಂದು ತ್ಯಾಗರಾಜ್ ಹೇಳಿದರು.
ಗುರುಪತ್‍ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು : ಭಾರತೀಯ ಅಧಿಕಾರಿ ಕೈವಾಡ ಕುರಿತ ತನಿಖೆಗೆ ಸಮ್ಮತಿ
ಹುಟ್ಟಿನಿಂದಲೇ ಸೋಂಕು ಬಾತನಾಗಿದ್ದ 25 ವರ್ಷದ ಪ್ರಶಾಂತ್ ಮಾತನಾಡಿ, ತಾನು ಕಲಬುರಗಿಯವನು. ನಾಲ್ಕನೆ ತರಗತಿಯಲ್ಲಿ ರಕ್ತ ಪರೀಕ್ಷೆ ಮಾಡಿದಾಗ ಸೋಂಕು ಪತ್ತೆಯಾಯಿತು. ಆರಂಭದಲ್ಲಿ ತುಂಬಾ ಕಷ್ಟವಾಗುತ್ತಿತ್ತು. ತಾರತಮ್ಯ ಹೆಚ್ಚಿತ್ತು. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದೇನೆ. ಸೋಂಕಿತರು ನಿಯಮಿತವಾಗಿ ಔಷ ಸೇವಿಸಿ ಆತಂಕವಿಲ್ಲದೆ ಜೀವನ ನಡೆಸಿ ಎಂದುಸಲಹೆ ನೀಡಿದರು.
ನಟ ಪ್ರೇಮ್ ಎದ್ದು ಬಂದು ಪ್ರಶಾಂತ್ ಹೆಗಲ ಮೇಲೆ ಕೈ ಇಟ್ಟು ನಿಜವಾದ ರಾಯಬಾರಿ ಮತ್ತು ಹಿರೋ ಈತ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯ ಏಡ್ಸ್ ಪ್ರಿವೆನ್ ಷನ್ ಸೊಸೈಟಿ ಪ್ರಾರಂಭವಾಗಿ 25 ವರ್ಷಗಳಾಗಿದ್ದು, ಈ ವರ್ಷ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಬದ್ಧತೆಯಿಂದ ಕೆಲಸ ಮಾಡಿದ ಎಲ್ಲರನ್ನು ಅಭಿನಂದಿಸುವುದಾಗಿ ಹೇಳಿದರು.
2013-14ರಲ್ಲಿ ಸೋಂಕಿತರ ಪ್ರಮಾಣ ಶೇ. 1.77 ರಷ್ಟಿತ್ತು. ಗರ್ಭಿಣಿಯರಲ್ಲಿ ಶೇ. 0.3ರಷ್ಟಿದ್ದ ಸೋಂಕಿನ ಪ್ರಮಾಣ ಈಗ ಶೇ.0.21ರಷ್ಟಾಗಿದೆ 2023-24 ಸಾಲಿನಲ್ಲಿ ಸೋಂಕಿನ ಪ್ರಮಾಣ ಶೇ. 0.36 ಇಳಿಕೆಯಾಗಿದೆ. ರಾಜ್ಯದಲ್ಲಿ 3,82,910 ಮಂದಿ ನೋಂದಣಿಯಾಗಿದ್ದರು. 1.85 ಲಕ್ಷ ಮಂದಿ ಎಆರ್ ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರು ಆತಂಕ ಪಡಬೇಕಿಲ್ಲ, ಸುರಕ್ಷಿತ ಕ್ರಮಗಳ ಮೂಲಕ ಮುಂಜಾಗ್ರತೆ ಅವಶ್ಯ ಎಂದರು.
ಏಡ್ಸ್ ನಿರ್ಮೂಲನೆಯಲ್ಲಿ ಶ್ರಮಿಸಿದ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಲಿ ಅಧ್ಯಕ್ಷರೂ ಆದ ಶಾಸಕ ಅಜಯ್ ಸಿಂಗ್, ನಟ ಪ್ರೇಮ್, ನಟಿ ಸಂಜನಾ ಗಲ್ರಾನಿ, ಹಿರಿಯ ಅಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.